ದುನಿಯಾ ವಿಜಿ ಹೇಳಿರುವ ಮಾತಿದು. 'ಎಲ್ಲಾ ರೀತಿಯ ಪಾತ್ರಗಳಿಗೂ ರಂಗಾಯಣ ರಘು ಹೊಂದಿಕೊಳ್ಳುತ್ತಾರೆ. ಅವರು ಗಾಂಧಿನಗರದ ಆಲ್‌ರೌಂಡರ್ ಇದ್ದಂತೆ' ಎಂದು ರಂಗಾಯಣ ರಘುವನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ಇದು ನಡೆದದ್ದು ರಂಗಾಯಣ ರಘು ನಟಿಸುತ್ತಿರುವ 'ರಾಮ ರಾಮ ರಘು ರಾಮ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ.
ಮಾತು ಮುಂದುವರಿಸಿದ ವಿಜಯ್, ನಾನು ರಘು ಅವರ ಅಭಿಮಾನಿ. 'ದುನಿಯಾ' ಚಿತ್ರದಲ್ಲಿ ನನಗೆ ದೊಡ್ಡ ಹೆಸರು ಬರಲು ರಘು ಅವರು ಪ್ರಮುಖ ಕಾರಣ. ನಮ್ಮದು ಒಂದು ರೀತಿಯಲ್ಲಿ ಗುರು-ಶಿಷ್ಯರ ಸಂಬಂಧ. ರಘು ಅಣ್ಣ ಕನ್ನಡ ಚಿತ್ರರಂಗದ ದೊಡ್ಡ ಆಸ್ತಿ ಎಂದು ಮನಸಾರೆ ಹೊಗಳಿದರು.
PR
ಮತ್ತೊಬ್ಬ ನಟ ಪ್ರೇಮ್, ಈ ಚಿತ್ರ ಶತದಿನಗಳನ್ನು ಪೂರೈಸಲಿ ಎಂದು ಹರಸಿದರು.
'ರಾಮ ರಾಮ ರಘು ರಾಮ' ಚಿತ್ರದ ನಾಯಕ ನಟ ರಂಗಾಯಣ ರಘು. ಇವರ ಜೊತೆಯಲ್ಲಿ ದೊಡ್ಡಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದರ್ಶನ್‌ರ 'ಬಾಸ್' ನಿರ್ದೇಶಿಸಿರುವ ರಘುರಾಜ್ ಈ ಹಾಸ್ಯ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ರಾಜಶೇಖರ್ ನಾಯ್ಡು.
ನಿರ್ದೇಶಕ ರಘುರಾಜ್ ಮಾತನಾಡುತ್ತಾ, ಇದನ್ನು ಅದ್ಬುತ ಚಿತ್ರ ಎಂದು ಹೇಳಲಾರೆ. ಆದರೆ, ಈ ಚಿತ್ರ ಜಾಕಿಚಾನ್ ಚಿತ್ರಗಳ ಫಾರ್ಮುಲಾಗಳನ್ನು ಒಳಗೊಂಡಿದೆ. ರಂಗಾಯಣ ರಘು ಮಾತ್ರ ಹೀರೋ ಅಲ್ಲ. ಚಿತ್ರದ ಪ್ರತಿಯೊಂದು ಪಾತ್ರಗಳು ಹೀರೋಗಳೇ ಎಂದರು.
ಚಿತ್ರದ ಕಥೆ ಕೇಳಿದಾಗ ನಾನೇ ಮಾಡಬೇಕಾದ ಚಿತ್ರ ಎಂದುಕೊಂಡಿದ್ದೆ. ಅಂದುಕೊಂಡಂತೆ ಆಗಿದೆ ಎಂದ ರಂಗಾಯಣ ರಘು, ನನಗೆ ಡ್ಯಾನ್ಸ್ ಮಾಡಬೇಕೆಂಬ ಕನಸು ಇತ್ತು ಅದು ಸಹ ಈ ಚಿತ್ರದಲ್ಲಿ ಈಡೇರಿದೆ ಎಂದರು.