'ಪ್ರೇಮಲೋಕ'ವೆಂಬ ಸಂಗೀತ ಸಾಗರವನ್ನು ಸೃಷ್ಟಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಹಂಸಲೇಖಾ ಜೋಡಿ ಕೊನೆಗೂ ಒಂದಾಗುತ್ತಿದೆ ಎಂಬ ಸುದ್ದಿಗಳು ಕನ್ನಡ ಚಿತ್ರಪ್ರೇಮಿಗಳಿಗೆ ಹಳಸಲು. ಅದನ್ನು ಕೇಳಿ ಕೇಳಿ ಸಾಕಾಗಿದೆ. ಸುದ್ದಿಗಳು ಬರುತ್ತವೇ ಹೊರತು, ಅವರಿಬ್ಬರೂ ಜತೆಯಾಗುತ್ತಿಲ್ಲ.
ಹಳೆ ಕಥೆಗಳೇನೇ ಇರಲಿ, ಈ ಬಾರಿ ಜತೆಯಾಗಲಿದ್ದಾರೆ ಎಂಬ ಸುದ್ದಿ ಹೆಚ್ಚು ಖಚಿತ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿಕೊಳ್ಳುತ್ತಲೇ ದೂರ-ದೂರವೇ ಇದ್ದ ಇವರಿಬ್ಬರನ್ನು ಜತೆಗೂಡಿಸುತ್ತಿರುವವರು ನಟ-ಕಥೆಗಾರ-ನಿರ್ದೇಶಕ ಮೋಹನ್.
MOKSHA
ಇಲ್ಲಿ ಚಿತ್ರಪ್ರೇಮಿಗಳು ನಿರಾಸೆಗೊಳಬೇಕಾದ ಅಂಶವೆಂದರೆ ಸಿನಿಮಾ ಸ್ವಮೇಕ್ ಆಗದೇ ಇರುವುದು. ತಮಿಳಿನ ಸೂಪರ್ ಹಿಟ್ 'ಮಾಯಿ' ರಿಮೇಕ್ ಇದು. ಕನ್ನಡದಲ್ಲಿನ್ನೂ ಹೆಸರಿಟ್ಟಿಲ್ಲ. ಮೋಹನ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಎನ್. ಕುಮಾರ್ ಹಣ ಹಾಕಲಿದ್ದಾರೆ. ಜನವರಿ ಅಂತ್ಯದಲ್ಲಿ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.
ಕ್ರೇಜಿ ಸ್ಟಾರ್ಗೆ ಹಲವು ಚಿತ್ರಗಳಲ್ಲಿ ಸಹಾಯಕನಾಗಿ ದುಡಿದಿರುವ ಮೋಹನ್, ಇಬ್ಬರನ್ನು ಜತೆಗೂಡಿಸಲು ಹರಸಾಹಸಪಟ್ಟಿದ್ದಾರೆ. ಈ ಹಿಂದೆ 'ಒಂದಾಗೋಣ ಬಾ' ಮೂಲಕ ಹಲವು ವರ್ಷಗಳ ತಮ್ಮ ವಿರಸವನ್ನು ಮುರಿದಿದ್ದವರನ್ನು ಪ್ರತ್ಯೇಕ ಪ್ರತ್ಯೇಕವಾಗಿಯೇ ಸಂಪರ್ಕಿಸಿ ಒಪ್ಪಿಸಿದ್ದಾರೆ. ನೀವೇ ಬೇಕು ಎಂದು ದುಂಬಾಲು ಬಿದ್ದು ಗೆದ್ದಿದ್ದಾರೆ.
'ಸಿಂಹ ರಾಶಿ' ಹೆಸರಿನಲ್ಲಿ ತೆಲುಗಿನಲ್ಲಿ ಬಂದಿರುವ ಈ ಸಿನಿಮಾದ ಚಿತ್ರಕಥೆ, ಸಂಭಾಷಣೆ ಪ್ರಕ್ರಿಯೆಗಳನ್ನು ಮುಗಿಸಿದ್ದೇನೆ. ಹಂಸಲೇಖಾ ಮಟ್ಟುಗಳನ್ನು ಹಾಕಲು ಶುರು ಮಾಡಿದ್ದಾರೆ. ಶೀಘ್ರದಲ್ಲೇ ಇತರ ಕಲಾವಿದರನ್ನು ಆಯ್ಕೆ ಮಾಡಲಿದ್ದೇನೆ ಎಂದು ಮೋಹನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಂಸಲೇಖಾ-ರವಿಚಂದ್ರನ್ ಜೋಡಿ ಬೇರ್ಪಟ್ಟ ನಂತರ ಇಬ್ಬರೂ ಬಹುತೇಕ ಫ್ಲಾಪ್ಗಳು. ಆದರೆ ಜತೆಯಾಗಿದ್ದ ಬಹುತೇಕ ಚಿತ್ರಗಳು ನಿರ್ಮಾಪಕರ ಜೇಬು ತುಂಬಿಸಿದ್ದವು.
ಇಬ್ಬರ ನಡುವೆ 'ಏನಾಗಿದೆ' ಎಂದು ಸ್ವತಃ ಅವರಲ್ಲೇ ಕೇಳಿದರೆ, 'ಏನಾಗಿಲ್ಲ' ಎಂದೇ ಉತ್ತರಿಸುತ್ತಾರೆ. ಆದರೆ ಆಪ್ತ ವಲಯದ ಪ್ರಕಾರ, ಇಬ್ಬರಿಗೂ ಅಡ್ಡ ಬಂದಿರುವುದು ಅಹಂ. ತಾನೇ ಮೇಲು ಎಂಬ ಭಾವವೇ ಸಂಬಂಧದಲ್ಲಿ ವಿಷ ಹಿಂಡಿದೆ. ಒಮ್ಮೆ ಮುರಿದ ಸಂಬಂಧವನ್ನು 'ಒಂದೋಗೋಣ ಬಾ' ಎಂದರೂ ರಿಪೇರಿ ಮಾಡಲಾಗಿಲ್ಲ.
ಹೊಸ ಪ್ರಯತ್ನದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.