ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಪೊರ್ಕಿ'ಯಲ್ಲಿ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ, ತೆಲುಗರ ನಾಡನ್ನು ಸುತ್ತಿ ಬಂದಿರುವ ಅಚ್ಚ ಕನ್ನಡತಿ ಪ್ರಣೀತಾ ಸುಭಾಷ್ ಹೇಳಿರುವ ಮಾತಿದು. 'ಮುತ್ತು'ಗಳನ್ನು ಪೊಣಿಸಲು ನನ್ನದೇನೂ ಅಡ್ಡಿಯಿಲ್ಲ ಎಂದು ಬಹಿರಂಗವಾಗಿಯೇ ಆಹ್ವಾನ ನೀಡಿ ಅಚ್ಚರಿ ಹುಟ್ಟಿಸಿದ್ದಾರೆ.
ಸಿದ್ಧಾರ್ಥ ಜತೆ 'ಬಾವಾ'ದಲ್ಲಿ ಬೆಚ್ಚನೆ ದೃಶ್ಯಗಳಲ್ಲಿ ಕಾಣಿಸಿಕೊಂಡು ಹಲವರ ಗಮನ ಸೆಳೆದರೂ ಚಿತ್ರ ಹಿಟ್ ಆಗಿರಲಿಲ್ಲ. ಇದರಿಂದಾಗಿ ಕೊಂಚ ನಿರಾಸೆಯಿಂದಲೇ ಪತ್ರಿಕೆಯೊಂದರ ಜತೆ ಮಾತನಾಡಿರುವ ಪ್ರಣೀತಾ, ಚಿತ್ರಕಥೆ ಬಯಸುವುದಾದರೆ ಯಾವ ತ್ಯಾಗಕ್ಕೂ ತಾನು ಸಿದ್ಧ ಎಂದು ಘೋಷಿಸಿಕೊಂಡಿದ್ದಾರೆ.
WD
'ಬಾವಾ'ದಲ್ಲಿ ಪ್ರಣೀತಾ ಬರೋಬ್ಬರಿ ಎರಡು ನಿಮಿಷಗಳ ಕಿಸ್ಸಿಂಗ್ ಮಾಡಿದ್ದರು. ಅಷ್ಟಿಷ್ಟು ಸೆನ್ಸಾರ್ ಆದ ನಂತರ ಕೆಲವೇ ಕ್ಷಣಗಳ ದೃಶ್ಯ ಮಾತ್ರ ಪ್ರೇಕ್ಷಕ ಮಹಾಶಯನಿಗೆ ಸಿಕ್ಕಿತ್ತು. ನೇರವಾಗಿ ತುಟಿಗೆ ತುಟಿ ಸೇರಿಸಿದ್ದ ದೃಶ್ಯಗಳವು.
ಇದರ ಬಗ್ಗೆ ಆಕೆಯಲ್ಲಿ ಯಾವುದೇ ಪಶ್ಚಾತಾಪವಿಲ್ಲ. ಮುಂದೆಯೂ ಅವಕಾಶ ಸಿಕ್ಕಿದರೆ ಅಂತಹ ದೃಶ್ಯಗಳಿಗೆ ಸೈ ಎನ್ನುವುದಾಗಿ ಪ್ರಣೀತಾ ಹೇಳಿಕೊಂಡಿದ್ದಾರೆ.
'ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರಿಂದ ಯಾವ ತೊಂದರೆಯೂ ಇಲ್ಲ. ಕಥೆಗೆ ಬೇಕೆನಿಸಿದರೆ ನಾನಂತೂ ಅದಕ್ಕೆ ಸಿದ್ಧಳಾಗಿದ್ದೇನೆ. ಈಗಷ್ಟೇ ಮತ್ತೊಂದು ತೆಲುಗು ಚಿತ್ರ ನನಗೆ ಸಿಕ್ಕಿದೆ. ಅದರ ಬಗ್ಗೆ ಹೆಚ್ಚೇನೂ ಹೇಳೋದಿಲ್ಲ' ಎಂದು ತಿಳಿಸಿದ್ದಾರೆ.
ಪೊರ್ಕಿಯಲ್ಲಿ ನಟಿಸಿದ ನಂತರ ಕಿರಿಕ್ ಪಾರ್ಟಿ ಎಂಬ ಬಿರುದು ಪಡೆದುಕೊಂಡಿದ್ದ ಪ್ರಣೀತಾ, ಸುದೀಪ್ ನಾಯಕನಾಗಿರುವ ಚಿತ್ರ ಸೇರಿದಂತೆ ಹಲವು ಅವಕಾಶಗಳಿಂದ ವಂಚಿತರಾದವರು. ಆದರೆ ಮೊನ್ನೆ ಮೊನ್ನೆ 'ಜರಾಸಂಧ'ನನ್ನು ಬಗಲಿಗೆ ಹಾಕಿಕೊಂಡಿದ್ದಾರೆ. ಐಂದ್ರಿತಾ ರೇ ನಟಿಸಬೇಕಿದ್ದ ಪಾತ್ರ ಪ್ರಣೀತಾಗೆ ಸಿಕ್ಕಿದೆ. ದುನಿಯಾ ವಿಜಯ್ ನಾಯಕನಾಗಿರುವ ಚಿತ್ರವಿದು.
ಈ ಬಗ್ಗೆ ಹೆಮ್ಮೆಯಿಂದಲೇ ಪ್ರಣೀತಾ ಮಾತಿಗಿಳಿಯುತ್ತಾರೆ. 'ಹಿಟ್ ಚಿತ್ರಗಳನ್ನು ನೀಡಿರುವ ಶಶಾಂಕ್ ಅವರಂತಹ ನಿರ್ದೇಶಕರ ಜತೆ ಕೆಲಸ ಮಾಡುವ ಅವಕಾಶ ಚಿಕ್ಕದೇನಲ್ಲ. ವಿಜಯ್ ಅವರ ದುನಿಯಾ ನೋಡಿದ ಮೇಲಂತೂ ಅವರ ಜತೆ ನಟಿಸುವುದು ಖುಷಿ ಎನಿಸಿದೆ' ಎನ್ನುತ್ತಾರೆ.
ಐಂದ್ರಿತಾ ಕೈಯಲ್ಲಿದ್ದ ಪಾತ್ರ ತಪ್ಪಿ ನಿಮಗೆ ಬಂದಿದೆ. ನೀವು ಎರಡನೇ ಆಯ್ಕೆಯೆಂದು ಬೇಸರವಿಲ್ಲವೇ ಎಂದು ಪ್ರಶ್ನಿಸಿದರೆ, 'ಹಾಗೇನಿಲ್ಲ. ಆ ವಿಚಾರ ನನಗೆ ಗೊತ್ತೇ ಇರಲಿಲ್ಲ. ಅದು ದೊಡ್ಡ ವಿಚಾರವೂ ಅಲ್ಲ. ಆ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ ಅನ್ನೋದೇ ಮುಖ್ಯ. ಶಶಾಂಕ್ ತನ್ನ ಚಿತ್ರಗಳಲ್ಲಿ ನಾಯಕಿಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿರುವ ಉದಾಹರಣೆಯಿರುವುದರಿಂದ ನಾನು ಕಣ್ಮುಚ್ಚಿ ಒಪ್ಪಿಕೊಂಡಿದ್ದೇನೆ' ಎಂದರು.
ಅಂದ ಹಾಗೆ ಈ ಪ್ರಣೀತಾ, ಲೂಸ್ ಮಾದ ಯೋಗೀಶ್‌ಗೆ ದೂರದ ಸಂಬಂಧಿಯಂತೆ!