ಇದೇನಪ್ಪಾ, ಕನ್ನಡದ 50ರ ಕನಸುಗಾರ ವಿ. ರವಿಚಂದ್ರನ್‌ಗೆ 20ರ ಆಸುಪಾಸಿನಲ್ಲಿರುವ ಅಚ್ಚಗನ್ನಡದ ಹುಡುಗಿ ಹರಿಪ್ರಿಯಾ ನಾಯಕಿನಾ ಎಂದು ಪ್ರಶ್ನೆ ಹಾಕುತ್ತಿದ್ದೀರಾ? ನಾಯಕಿನೋ, ಮಗಳೋ-- ಹರಿಪ್ರಿಯಾ ಅವರು 'ಮಂಜಿನ ಹನಿ'ಯಲ್ಲಿ ನಟಿಸುತ್ತಿರುವುದಂತೂ ಖಚಿತ.
ಈಗಾಗಲೇ ಹಲವು ವರ್ಷಗಳನ್ನು ಕಳೆದಿರುವ 'ಮಂಜಿನ ಹನಿ' ಮರು ಜೀವ ಪಡೆದುಕೊಂಡಿದೆ. ಸಂದೇಶ್ ನಾಗರಾಜ್ ಹಲವು ಕೋಟಿಗಳನ್ನು ಸುರಿದು ಸುಸ್ತಾಗಿದ್ದು, ವಿಚಿತ್ರ ಗೆಟಪ್ಪಿನಲ್ಲಿ ರವಿಚಂದ್ರನ್ ಕಾಣಿಸಿಕೊಂಡದ್ದು, ಪೂನಮ್ ಕೌರ್ ಮತ್ತು ಚಾರುಲತಾ ಕುಣಿದದ್ದು, ಶೂಟಿಂಗ್ ಮುಗಿಸಿ ಎಡಿಟಿಂಗ್ ಟೇಬಲ್ಲಿಗೆ ಬಂದ ಮೇಲೆ 'ಎಲ್ಲವೂ ವೇಸ್ಟ್' ಎಂದು ಕ್ರೇಜಿ ಸ್ಟಾರ್ ಕೈ ಚೆಲ್ಲಿದ್ದು ಹಳೆಯ ಕಥೆ.
ಈಗ ಕಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ, ಸಂಪೂರ್ಣವಾಗಿ ಮರು ಚಿತ್ರೀಕರಣ ನಡೆಸಲು ರವಿಚಂದ್ರನ್ ನಿರ್ಧರಿಸಿದ್ದಾರೆ. ನಿರ್ಮಾಪಕ-ನಿರ್ದೇಶಕ-ಕಥೆ-ಚಿತ್ರಕಥೆ-ಸಂಭಾಷಣೆ-ಸಂಗೀತ-ಸಂಕಲನ ಎಲ್ಲವೂ ಅವರದ್ದೇ.
'ಮಂಜಿನ ಹನಿ' ನಾನಂದುಕೊಂಡಂತೆ ಬಂದಿಲ್ಲ. ಇದು ನನ್ನ ಕನಸಿನ ಪ್ರೊಜೆಕ್ಟ್ ಎಂದು ಈ ಹಿಂದೆಯೇ ಹೇಳಿದಂತೆ, ಕನ್ನಡ ಪ್ರೇಕ್ಷಕರನ್ನು ಮೆಚ್ಚಿಸಿಯೇ ಸಿದ್ಧ. ಖಂಡಿತಾ ನನ್ನ ಹಳೆಯ ಶೈಲಿಯನ್ನು ಚಿತ್ರದಲ್ಲಿ ನಿರೀಕ್ಷಿಸಿ ಎಂದು ಆಪ್ತರಲ್ಲಿ ರವಿ ಹೇಳಿಕೊಂಡಿದ್ದಾರೆ. ಅದೇ ಕಾರಣದಿಂದ ಈಗಾಗಲೇ ಐದು ಕೋಟಿ ರೂಪಾಯಿ ಖರ್ಚು ಮಾಡಿ, ಚಿತ್ರೀಕರಣ ಮಾಡಿರುವ ರೀಲುಗಳನ್ನು ಕಸದ ಬುಟ್ಟಿಗೆ ಹಾಕಿದ್ದಾರೆ.
ಚಿತ್ರೀಕರಣಕ್ಕೆ ಚಾಲನೆಯೂ ಸಿಕ್ಕಿದೆ. ಹರಿಪ್ರಿಯಾ ಒಂದೆರಡು ದಿನ ಶೂಟಿಂಗಿನಲ್ಲಿ ಪಾಲ್ಗೊಂಡಿದ್ದಾರೆ. ತನಗೆ ಪಾತ್ರ ಸಿಕ್ಕಿರುವುದಕ್ಕಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನನಗಿದು 2011ರ ಗಿಫ್ಟ್ ಎಂದೇ ಹೇಳಿಕೊಂಡಿದ್ದಾರೆ.
'ನಾನು ತೆಲುಗು ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಅಲ್ಲಿ ಭಾರೀ ಪ್ರತಿಭಟನೆ (ತೆಲಂಗಾಣ) ನಡೆಯುತ್ತಿರುವುದರಿಂದ ಚಿತ್ರೋದ್ಯಮ ಸ್ಥಗಿತಗೊಂಡಿದೆ. ಹಾಗಾಗಿ ನನ್ನ ಎಲ್ಲಾ ಡೇಟ್ಸ್‌ಗಳೂ ಮುಕ್ತವಾಗಿವೆ. ಅದೇ ಹೊತ್ತಿನಲ್ಲಿ ಮಂಜಿನ ಹನಿಯಲ್ಲಿ ನಟಿಸುವಂತೆ ಆಹ್ವಾನ ಬಂತು. ಹಾಗಾಗಿ ಒಪ್ಪಿಕೊಂಡೆ. ಇದು ನನಗೆ ಹೊಸ ವರ್ಷದ ಉಡುಗೊರೆಯಂತೆ ಸಿಕ್ಕಿದೆ' ಎಂದು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಇಷ್ಟೆಲ್ಲ ಕಸರತ್ತನ್ನು ರವಿಚಂದ್ರನ್ ಮಾಡುತ್ತಿದ್ದಾರೆ ಅಂದ ಮೇಲೆ ಇನ್ನೊಂದು 'ಏಕಾಂಗಿ'ಯನ್ನು ಪ್ರೇಕ್ಷಕರು ಮತ್ತು ಅವರ ಅಭಿಮಾನಿಗಳು ನಿರೀಕ್ಷಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಅದು ಮತ್ತೊಂದು 'ಶಾಂತಿ ಕ್ರಾಂತಿ' ಆಗದಿರಲಿ ಎಂಬುದಷ್ಟೇ ನಮ್ಮ ಆಶಯ.