ವರನಟ ರಾಜ್‌ಕುಮಾರ್ ಮತ್ತು ಶಂಕರ್‌ನಾಗ್ ಜತೆಯಾಗಿ ನಟಿಸಿದ್ದ ಚಿತ್ರ 'ಅಪೂರ್ವ ಸಂಗಮ'. ಸಾಕಷ್ಟು ಹೆಸರು ಮಾಡಿದ್ದ ಮತ್ತು ಗಮನ ಸೆಳೆದಿದ್ದ ಚಿತ್ರವದು. ಅದೇ ಹೆಸರಿನ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಾರಾ?
ಈ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಆದರೆ ರಜನಿ ಮತ್ತು ಉಪ್ಪಿ ಜತೆಯಾಗಿರುವ ಮತ್ತು 'ಅಪೂರ್ವ ಸಂಗಮ' ಎಂದು ಬರೆದಿರುವ ಜಾಹೀರಾತೊಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಹೆಚ್ಚಿನ ವಿವರಗಳನ್ನು ಅದರಲ್ಲಿ ನೀಡಲಾಗಿಲ್ಲ.
1984ರಲ್ಲಿ ವೈ.ಆರ್. ಸ್ವಾಮಿ ನಿರ್ಮಿಸಿ, ನಿರ್ದೇಶಿಸಿದ್ದ 'ಅಪೂರ್ವ ಸಂಗಮ'ದಲ್ಲಿ ವಜ್ರಮುನಿ ಮತ್ತು ಅಂಬಿಕಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಉಪೇಂದ್ರ ಕುಮಾರ್ ಸಂಗೀತ ನೀಡಿದ್ದರೆ, ರಕ್ಷಿತಾ ತಂದೆ ಬಿ.ಸಿ. ಗೌರಿಶಂಕರ್ ಛಾಯಾಗ್ರಾಹಕರಾಗಿದ್ದರು.
ಈಗ ನೀಡಿರುವ ಜಾಹೀರಾತಿನ ಪ್ರಕಾರ ಹೊಸ 'ಅಪೂರ್ವ ಸಂಗಮ'ದ ನಿರ್ದೇಶಕ ಶ್ರೀಧರ್. ಛಾಯಾಗ್ರಹಣ ಲಾಲ್ ಬಾಬುರದ್ದು. ಕ್ರಿಶ್ ಜೋಶಿ ಸಂಭಾಷಣೆ ಬರೆಯಲಿದ್ದಾರೆ. ಬನ್ನಿ, ಈ ಮೂವರ ಅಚ್ಚರಿಯ ಹಿನ್ನೆಲೆ ನೋಡೋಣ.
ವಿಜಯ ರಾಘವೇಂದ್ರ ನಾಯಕರಾಗಿದ್ದ ಸದ್ದಿಲ್ಲದೆ ಮಾಯವಾಗಿದ್ದ 'ಕಾರಂಜಿ' ಎಂಬ ಚಿತ್ರ ನಿರ್ದೇಶಿಸಿದವರು ಶ್ರೀಧರ್, 'ಗಾಂಧಿ ಸ್ಮೈಲ್ಸ್' ಎಂಬ ಬಿಡುಗಡೆಯಾಗದ ಚಿತ್ರ ನಿರ್ದೇಶಿಸಿದವರು ಕ್ರಿಶ್ ಜೋಶಿ ಮತ್ತು ಕುಮಾರ್ ಗೋವಿಂದ್ ಅವರ 'ಸತ್ಯ' ಚಿತ್ರದ ಮೂಲಕ ಬೆಳಕಿಗೆ ಬಂದವರು ಲಾಲ್ ಬಾಬು!
ಇದೇ ಟೀಮಿನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಸಂಗೀತ ನಿರ್ದೇಶಕ ವೀರ ಸಮರ್ಥ್ ಈಗ 'ಅಪೂರ್ವ ಸಂಗಮ'ದಲ್ಲೂ ಇದ್ದಾರೆ. ಉಳಿದಂತೆ 'ಶಿವು ಅಡ್ಡ' ಖ್ಯಾತಿಯ ಸ್ವಾಮಿ ಮತ್ತು ಮಧು ಎಂಬವರೂ ಸೇರಿದಂತೆ ಹಲವು ಮಂದಿ ನಿರಾಸೆ ಅನುಭವಿಸಿದವರು ಜಾಹೀರಾತಿನಲ್ಲಿ ಹೆಸರು ಪಡೆದಿದ್ದಾರೆ.
'Dream can come true' ಎಂಬ ಉಪ ಶೀರ್ಷಿಕೆಯನ್ನು ಚಿತ್ರಕ್ಕೆ ನೀಡಲಾಗಿದೆ. ಈ ಚಿತ್ರದ ತಂಡ ಮತ್ತು ಕೆಳಗಿನ ಶೀರ್ಷಿಕೆಯನ್ನು ನೋಡಿದಾಗ, ಬಹುತೇಕ ಇದೊಂದು ಗಿಮಿಕ್ಕಿಗಾಗಿ ಪ್ರಕಟಿಸಲಾಗಿರುವ ಜಾಹೀರಾತು ಎನ್ನುವುದು ಖಚಿತ. ಉಪ್ಪಿ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾದು ನೋಡೋಣ, ಏನಂತೀರಾ?