ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುಧಾ ಬೆಳವಾಡಿಯ ಮುದ್ದಿನ ಮಗಳೀಗ ದಿಗಂತ್‌ಗೆ ಜೋಡಿ (Samyuktha Belawadi | Life Ishtene | Sudha Belawadi | Prakash Belawadi)
ಸುದ್ದಿ/ಗಾಸಿಪ್
Bookmark and Share Feedback Print
 
ಬೆಳವಾಡಿ ಕುಟುಂಬದ ಮೂರನೇ ತಲೆಮಾರು ಚಿತ್ರರಂಗ ಪ್ರವೇಶಿಸುತ್ತಿದೆ. ಅದೂ ತನ್ನ ಅಜ್ಜಿ ಮತ್ತು ತಾಯಿ ಬಣ್ಣದ ಲೋಕದಲ್ಲಿ ಬಿಡುವಿಲ್ಲದೆ ನಟಿಸುತ್ತಿರುವ ಹೊತ್ತಿನಲ್ಲಿ. ಆಕೆಯೇ ಸಂಯುಕ್ತ ಬೆಳವಾಡಿ. ಸುಧಾ ಬೆಳವಾಡಿಯವರ ಮುದ್ದಿನ ಮಗಳು.

ಚಿತ್ರರಂಗಕ್ಕೆ ವಾರಕ್ಕೊಬ್ಬರಂತೆ ಹೊಸಬರು ಬರುತ್ತಿದ್ದರೂ, ಬೆಳವಾಡಿ ಕುಟುಂಬದ ಕುಡಿ ಬರುತ್ತಿರುವುದು ಕುತೂಹಲ ಹೆಚ್ಚಿಸಿದೆ. ಅದಕ್ಕಿರುವ ಕಾರಣ ಇದು ಕಲಾವಿದರದ್ದೇ ಕುಟುಂಬ ಆಗಿರುವುದು. ಕಲೆಯನ್ನು ಅರೆದು ಕುಡಿದ ಕುಟುಂಬವದು. ಜತೆಗೆ ಒಬ್ಬರನ್ನು ಇನ್ನೊಬ್ಬರು ಮೀರಿಸುವಷ್ಟು ಸುಂದರ ಮುಖಾರವಿಂದವನ್ನು ಹೊಂದಿದವರು.

ಯೋಗರಾಜ್ ಭಟ್ ಶಿಷ್ಯ ಪವನ್ ಕುಮಾರ್ ನಿರ್ದೇಶಿಸುತ್ತಿರುವ 'ಲೈಫು ಇಷ್ಟೇನೆ' ಎಂಬ ಚಿತ್ರದಲ್ಲಿ ಸಂಯುಕ್ತ ಬೆಳವಾಡಿ ನಾಯಕಿ. ಸಿಂಧು ಎನ್ನುವ ಇನ್ನೊಬ್ಬ ನಾಯಕಿಯೂ ಚಿತ್ರದಲ್ಲಿರುತ್ತಾಳೆ. ಇವರಿಬ್ಬರಿಗೂ ನಾಯಕ ಗುಳಿಕೆನ್ನೆ ಹುಡುಗ ದಿಗಂತ್.
PR

ನಾಯಕ-ನಾಯಕಿ ಆಯ್ಕೆಯನ್ನು ಪೂರ್ಣಗೊಳಿಸಿರುವ ನಿರ್ದೇಶಕ ಪವನ್ ಕುಮಾರ್ ಈಗ ಚಿತ್ರಕಥೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಆದಷ್ಟು ಬೇಗ, ಅಂದರೆ ಮಾರ್ಚ್ ಹೊತ್ತಿಗೆ 'ಲೈಫು ಇಷ್ಟೇನೆ'ಗೆ ಚಾಲನೆ ನೀಡಬೇಕು ಎನ್ನುವುದು ಚಿತ್ರತಂಡದ ಬಯಕೆಯಂತೆ.

ಕಲಾವಿದರ ಕುಟುಂಬವಿದು...
'ಮುಂಗಾರು ಮಳೆ'ಯಲ್ಲಿ ಪ್ರೀತಮ್ (ಗಣೇಶ್) ಮುದ್ದಿನ ತಾಯಿ ಕಮಲಿಯಾಗಿ ಕಾಣಿಸಿಕೊಂಡು ಕನ್ನಡಿಗರ ಮನೆ-ಮನಗಳಲ್ಲಿ ಗಟ್ಟಿ ಸ್ಥಾನವನ್ನು ಪಡೆದಿದ್ದ ಸುಧಾ ಬೆಳವಾಡಿ ಮೂಲತಃ ರಂಗಭೂಮಿಯವರು.

ಭಾರ್ಗವಿ ನಾರಾಯಣ್ ಮತ್ತು ಮೇಕಪ್ ನಾಣಿಯವರ ಮಗಳು ಸುಧಾ ಬೆಳವಾಡಿ. ಸಂಯುಕ್ತ ಬೆಳವಾಡಿಯವರ ಸೋದರ ಮಾವ ಪ್ರಕಾಶ್ ಬೆಳವಾಡಿಯವರಂತೂ ನಾಟಕ ರಂಗದಲ್ಲಿ ಸುಪ್ರಸಿದ್ಧರು. ಇತರ ಕ್ಷೇತ್ರಗಳಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡವರು ಅವರು.

ಭಾರ್ಗವಿ ನಾರಾಯಣ್ ಅವರು ಧಾರಾವಾಹಿಗಳ ಮೂಲಕ ಹೆಚ್ಚು ಪ್ರಸಿದ್ಧರಾದವರು. ಅವರ ಗಂಡ, ಅಂದರೆ ಸಂಯುಕ್ತ ಬೆಳವಾಡಿಯ ತಾತ ಮೇಕಪ್ ನಾಣಿಯವರ ಹೆಸರಿನಲ್ಲೇ ಅವರ ವೃತ್ತಿಜೀವನದ ಸಂಕೇತವಿದೆ. ಒಟ್ಟಾರೆ ಈ ಕುಟುಂಬವೇ ಕಲಾವಿದರಿಂದ ತುಂಬಿ ಹೋಗಿರುವಂತದ್ದು.

ಅಂದ ಹಾಗೆ, ಈ ಸಂಯುಕ್ತ ಬೆಳವಾಡಿ ಈ ಹಿಂದೆ 'ಆ ದಿನಗಳು' ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡವರು. ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಮಾತ್ರ ಇದೇ ಮೊದಲು.

ಮೂರನೇ ತಲೆಮಾರು ಹೊಸತಲ್ಲ...
ಈ ರೀತಿಯಾಗಿ ಮೂರನೇ ತಲೆಮಾರು ಚಿತ್ರರಂಗ ಪ್ರವೇಶ ಮಾಡಿರುವುದು ಇದೇ ಮೊದಲಲ್ಲ. ವರನಟ ಡಾ. ರಾಜ್‌ಕುಮಾರ್, ರಾಜೇಂದ್ರ ಸಿಂಗ್ ಬಾಬು ಮುಂತಾದವರ ಉದಾಹರಣೆಗಳು ನಮ್ಮ ಮುಂದಿವೆ.

ಸುಬ್ಬಯ್ಯ ನಾಯ್ಡು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದವರು. ಅವರ ಮಗ ಲೋಕೇಶ್ ಕೂಡ ನಾಯಕರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟರಾಗಿ ಮಿಂಚಿದ್ದವರು. ಲೋಕೇಶ್ ಪುತ್ರ ಸೃಜನ್ ಲೋಕೇಶ್ ಕೂಡ ಅದೇ ಹಾದಿಯಲ್ಲಿ ಮುಂದುವರಿಯುತ್ತಿದ್ದಾರೆ.

ಶಂಕರ್ ಸಿಂಗ್-ಪ್ರತಿಮಾ ದೇವಿ ಕುಟುಂಬವೂ ಇದೇ ಸಾಲಿನಲ್ಲಿ ನಿಲ್ಲುತ್ತದೆ. ಅವರ ಪುತ್ರ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಕ-ನಿರ್ಮಾಪಕರಾಗಿ ಮಿಂಚಿದವರು. ಅವರ ಪುತ್ರ ಆದಿತ್ಯ ಈಗ ನಾಯಕ ನಟ.

ನಿರ್ಮಾಪಕ ಎನ್. ವೀರಸ್ವಾಮಿಯವರ ಪುತ್ರ ಕನ್ನಡದ ಕನಸುಗಾರ ವಿ. ರವಿಚಂದ್ರನ್. ಅವರ ಪುತ್ರ ಮನೋರಂಜನ್ ಈಗಾಗಲೇ ಬಾಲನಟನಾಗಿ ಕಾಣಿಸಿಕೊಂಡವರು. ನಾಯಕನಾಗುವ ಸಿದ್ಧತೆಯಲ್ಲೀಗ ಅವರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ