ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣದಲ್ಲಿ ಸಾಕಷ್ಟು ಸುದ್ದಿಯಾಗಿ, ನಾಪತ್ತೆಯಾಗಿ ಇತ್ತೀಚೆಗಷ್ಟೇ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಮತ್ತು ತನ್ನ ಮೇಲಿನ ಆರೋಪಗಳಿಗೆ ಉತ್ತರಿಸಿದ್ದ ನಟಿ ರಂಜಿತಾ ಈಗ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಆಕೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕರೇ ಮತ್ತೆ ಈಗ ಪುನರ್ಜನ್ಮ ನೀಡಲು ಹೊರಟಿದ್ದಾರೆ.
ಮೂಲಗಳ ಪ್ರಕಾರ ತಮಿಳಿನ ಹೆಸರಾಂತ ನಿರ್ದೇಶಕ ಭಾರತೀರಾಜ ಅವರು ಈ ಆಫರ್ ಮುಂದಿಟ್ಟಿದ್ದಾರೆ.
ತಾನೇ ಬಣ್ಣದ ಲೋಕಕ್ಕೆ ಪರಿಚಯಿಸಿದ ಹುಡುಗಿ ಇಂದು ನಡು ನೀರಿನಲ್ಲಿದ್ದಾಳೆ. ಸಿಡಿಯ ಅಶ್ಲೀಲ ದೃಶ್ಯಗಳು, ಆಕೆಯ ಮೇಲಿರುವ ಆರೋಪಗಳು ನಿಜವೋ ಸುಳ್ಳೋ-- ಆದರೆ ಆಕೆಯೀಗ ಕಷ್ಟದಲ್ಲಿ ಇರುವುದಂತೂ ಹೌದು. ಈ ಹೊತ್ತಿನಲ್ಲಿ ಮಾನವೀಯತೆಯ ದೃಷ್ಟಿಯಿಂದ ಸಹಾಯ ಮಾಡದೇ ಇದ್ದರೆ ಹೇಗೆ ಎಂಬ ದೃಷ್ಟಿಯಲ್ಲಿ ಭಾರತೀರಾಜ ಮುಂದಾಗಿದ್ದಾರೆ.
ವಿಜಯಶಾಂತಿ, ರಾಧಿಕಾ ಶರತ್ ಕುಮಾರ್, ರೇವತಿ, ನೆಪೋಲಿಯನ್, ವೈರಮುತ್ತು, ಗೌಂಡಮಣಿ, ರಿಯಾ ಸೇನ್, ಪ್ರಿಯಾಮಣಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಹೆಮ್ಮೆಯ ನಿರ್ದೇಶಕ ಭಾರತೀರಾಜ ಕಳೆದೆರಡು ವರ್ಷಗಳಿಂದ ನಿರ್ದೇಶನ ಮಾಡಿಲ್ಲ.
ಹಾಗೆಂದು ಸುಮ್ಮನೆ ಕುಳಿತವರಲ್ಲ. ಕಳೆದೆರಡು ವರ್ಷಗಳಿಂದ ಭಿನ್ನವೆನಿಸುವ ಚಿತ್ರವೊಂದಕ್ಕೆ ಕೆಲಸ ಮಾಡಿದ್ದಾರೆ. ಕನಸಿನ ಕೂಸು ಎಂದೇ ಪರಿಗಣಿಸಲ್ಪಟ್ಟಿರುವ 'ಅಪ್ಪನ್ ಆತಾ' (ಅಪ್ಪ ಅಮ್ಮಾ) ಎಂಬ ಈ ಚಿತ್ರದಲ್ಲೇ ರಂಜಿತಾಗೆ ಒಂದು ಪ್ರಮುಖ ಪಾತ್ರವನ್ನು ನೀಡಲು ಅವರು ಹೊರಟಿರುವುದು.
ಕೆಲ ದಿನಗಳ ಹಿಂದಷ್ಟೇ ಜೀ ಕನ್ನಡ ಚಾನೆಲ್‌ನ 'ಬದುಕು ಜಟಕಾ ಬಂಡಿ'ಯಲ್ಲಿ ಕಾಣಿಸಿಕೊಂಡು ತನ್ನ ಕಷ್ಟಗಳನ್ನು ಮಾಳವಿಕಾ ಅವಿನಾಶ್, ತೇಜಸ್ವಿನಿ ರಮೇಶ್, ಸುಧಾ ಬೆಳವಾಡಿ ಜತೆ ಹಂಚಿಕೊಂಡಿದ್ದ ರಂಜಿತಾ, ಸ್ವಾಮಿ ಜತೆಗಿನ ರಾಸಲೀಲೆ ಪ್ರಕರಣ ಬೆಳಕಿಗೆ ಬರುವ ಮೊದಲೇ ನಟಿಸಿದ್ದ ಮಲಯಾಳಿ ಚಿತ್ರ ಇದೇ ತಿಂಗಳಲ್ಲಿ ತೆರೆಗೆ ಬರುತ್ತಿದೆ.
ಡಾನ್ ಅಲೆಕ್ಸ್ ಮತ್ತು ಬಿಜು ನಿರ್ದೇಶನದ 'ಪುತ್ತುಮುಗಂಗಳ್' ಎಂಬ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ರಂಜಿತಾ ಕಾಣಿಸಿಕೊಂಡಿದ್ದಾರೆ.
ಸೆಕ್ಸ್ ಸಿಡಿ ಬಹಿರಂಗವಾಗಿ ಅಮೆರಿಕಾಕ್ಕೆ ಹೋಗುವ ಮೊದಲೇ ಈ ಚಿತ್ರದಲ್ಲಿ ನಟಿಸಿದ್ದೆ. ಈಗಷ್ಟೇ ಬಿಡುಗಡೆಯಾಗುತ್ತಿದೆ. ಇದುವರೆಗೂ ನಾನು ಯಾವುದೇ ಹೊಸ ಚಿತ್ರದಲ್ಲಿ ನಟಿಸುವ ಒಪ್ಪಂದ ಮಾಡಿಕೊಂಡಿಲ್ಲ. ಇನ್ನೂ ಸ್ವಲ್ಪ ಸಮಯ ವಿಶ್ರಾಂತಿ ಬೇಕು ಎಂದು ಪತ್ರಿಕೆಯೊಂದರ ಜತೆ ಮಾತನಾಡಿರುವ ರಂಜಿತಾ ಹೇಳಿಕೊಂಡಿದ್ದಾರೆ.