ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೀರೋಗಳಿಗೆ ಕೋಟಿ ಕೊಡ್ತೀರಿ, ನಮಗ್ಯಾಕಿಲ್ಲ: ನಿಧಿ ಪ್ರಶ್ನೆ
(Nidhi Subbaiah | Krishnan Marriage Story | Pancharangi | Kannada actress)
ಹೀರೋಗಳಿಗೆ ಕೋಟಿ ಕೊಡ್ತೀರಿ, ನಮಗ್ಯಾಕಿಲ್ಲ: ನಿಧಿ ಪ್ರಶ್ನೆ
PR
ನಮ್ಮ ಸಮಾಜದ ಎಲ್ಲಾ ಮಜಲುಗಳಲ್ಲಿ ಇರುವ ಸಮಸ್ಯೆಯಿದು. ಮಹಿಳೆ ಎಷ್ಟೇ ಸಬಲೆ, ಪುರುಷನಷ್ಟೇ ಸಾಮರ್ಥ್ಯ ಉಳ್ಳವಳು ಎಂದು ಹಲವು ರಂಗಗಳಲ್ಲಿ ತೋರಿಸಿಕೊಟ್ಟರೂ ಕೆಲವು ವಿಚಾರಗಳಿಗೆ ಬಂದಾಗ ಸುಧಾರಣಾವಾದಿಗಳೂ ಸುಮ್ಮನಾಗುತ್ತಾರೆ. ಇದಕ್ಕೆ ಸಿನಿಮಾ ರಂಗವೂ ಹೊರತಲ್ಲ. ಅದನ್ನೇ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಕೂಡ ಪ್ರಶ್ನೆ ಮಾಡಿದ್ದಾರೆ.
ಅವರ ಅಸಮಾಧಾನವಿರುವುದು ಸಂಭಾವನೆ ಕುರಿತು. ನಾಯಕರಿಗೆ ಕೊಡುವಷ್ಟು ಸಂಭಾವನೆ ನಮಗೆ ಸಿಗುತ್ತಿಲ್ಲ. ಅವರಿಗೆ ಕೊಟ್ಟ ಅರ್ಧದಷ್ಟು ಕೂಡ ನಮಗೆ ಸಿಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರೀಕರಣಕ್ಕಾಗಿ ಥಾಯ್ಲೆಂಡ್‌ಗೆ ತೆರಳಿದ್ದ ಅವರು ಇತ್ತೀಚೆಗಷ್ಟೇ ವಾಪಸ್ ಬಂದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ, ನಾನು ಅಲ್ಲಿ ಎಂಟು ದಿನಗಳ ಕಾಲ ಇದ್ದೆ. ಅಲ್ಲಿ ಒಂದು ರೊಮ್ಯಾಂಟಿಕ್ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ಅಲ್ಲಿನ ಚಿತ್ರೀಕರಣ ತುಂಬಾ ಖುಷಿ ಕೊಟ್ಟಿದೆ ಎಂದರು.
ಅವರು ಕೇವಲ ಗ್ಲಾಮರಸ್ ಪಾತ್ರಗಳಲ್ಲಷ್ಟೇ ಯಶಸ್ಸನ್ನು ಹುಡುಕುವ ಜಾಯಮಾನದವರಲ್ಲ. ಬೇರೆಯದೇ ಆದ ಹಾದಿಯಲ್ಲಿ ಯಶಸ್ಸನ್ನು ಹುಡುಕಲು ಹೊರಟಿದ್ದಾರೆ. ಅದಕ್ಕೆ ಇರುವ ಉದಾಹರಣೆ ಒಪ್ಪಿಕೊಂಡಿರುವ ಸಿನಿಮಾಗಳು. ಮೊದಲ ಚಿತ್ರ ಪಂಚರಂಗಿ, ನಂತರ ವೀರಬಾಹು, ಈಗ ಕೃಷ್ಣನ್ ಮ್ಯಾರೇಜ್ ಸ್ಟೋರಿ.
ಇದನ್ನು ಸ್ವತಃ ನಿಧಿ ಒಪ್ಪಿಕೊಂಡಿದ್ದಾರೆ. ಹೌದು, ನಾನು ಮೇಕಪ್ ಇಲ್ಲದೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದೇನೆ. ತೆರೆಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವುದು ಮತ್ತು ಗ್ಲಾಮರ್ ಆಗಿರುವುದು ಒಬ್ಬ ನಾಯಕಿಯ ವೃತ್ತಿಜೀವನದ ನಿಟ್ಟಿನಲ್ಲಿ ಅಗತ್ಯವಾದುದು. ಆದರೆ ಜನ ಪಾತ್ರವನ್ನು ಗುರುತಿಸುತ್ತಾರೆ. ಅದೇ ಹಾದಿಯಲ್ಲಿ ನಾನು ಕೂಡ ಸಾಗುತ್ತಿದ್ದೇನೆ ಎಂದಿದ್ದಾರೆ.
ಪಂಚರಂಗಿಯಲ್ಲಿ ಮಿಂಚಿದ ಹೊರತಾಗಿಯೂ ಭಾರೀ ಸಂಖ್ಯೆಯಲ್ಲಿ ನಿಧಿಗೆ ಆಫರುಗಳು ಬಂದಿಲ್ಲ. ಕೇವಲ ಎರಡು ಸಿನಿಮಾಗಳಷ್ಟೇ ಆಕೆಯ ಕೈಯಲ್ಲಿವೆ. ಆದರೆ ಅದು ತನಗೆ ಮುಖ್ಯವಲ್ಲ ಎನ್ನುವುದು ನಿಧಿ ಖಡಕ್ ಮಾತು.
ನನ್ನಲ್ಲಿ ನಾಲ್ಕು ಅಥವಾ ಐದು ಚಿತ್ರಗಳಿವೆ ಎಂದು ನಾನು ಯಾವತ್ತೂ ಹೇಳಿಕೊಳ್ಳುವುದಿಲ್ಲ. ಅದು ಮುಖ್ಯವಲ್ಲ. ನನಗೆ ಚಿತ್ರಗಳ ಕೊರತೆಯೂ ಇಲ್ಲ. ಪ್ರತಿಭೆ ಇದ್ದರೆ ಖಂಡಿತಾ ಅವಕಾಶಗಳಿರುತ್ತವೆ. ನಾನಂತೂ ಚೂಸಿಯಾಗಿದ್ದೇನೆ. ನನಗೆ ಬೇಕಾದ ಚಿತ್ರಗಳನ್ನು ಮಾತ್ರ ಆರಿಸಿಕೊಳ್ಳುತ್ತಿದ್ದೇನೆ. ಜನ ನನ್ನನ್ನು ಗುರುತಿಸಬೇಕು ಎನ್ನುವುದೇ ನನ್ನ ಬಯಕೆ ಎನ್ನುತ್ತಾರೆ.
ಸ್ಯಾಂಡಲ್‌ವುಡ್‌ನಲ್ಲಿ ಪರಭಾಷಾ ನಟಿಯರು ಕಾಣಿಸಿಕೊಳ್ಳುತ್ತಿರುವುದು ಹೆಚ್ಚುತ್ತಿದೆ ಎಂಬ ವಾದವನ್ನೂ ನಿಧಿ ನೇರಾನೇರ ಒಪ್ಪಿಕೊಳ್ಳುತ್ತಿಲ್ಲ. ಅದರಲ್ಲಿ ಬದಲಾವಣೆಗಳಾಗುತ್ತಿವೆ ಎಂದು ವಾದಿಸಿದ್ದಾರೆ.
ಯೋಗರಾಜ್ ಭಟ್, ಶಶಾಂಕ್ ಮುಂತಾದ ನಿರ್ದೇಶಕರುಗಳು ಕನ್ನಡದ ನಟಿಯರನ್ನೇ ಆರಿಸುತ್ತಾರೆ. ಇಲ್ಲಿನ ನಟಿಯರು ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಜತೆ ಹೆಚ್ಚು ನಿರ್ಮಾಪಕರು ಮತ್ತು ನಿರ್ದೇಶಕರು ತೃಪ್ತಿ ವ್ಯಕ್ತಪಡಿಸುತ್ತಾರೆ. ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.
ಆದರೆ ಸಂಭಾವನೆ ವಿಚಾರ ಬಂದಾಗ ಇದನ್ನೇ ಹೇಳುವಂತಿಲ್ಲ. ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ನಾಯಕರಷ್ಟು ಸಂಭಾವನೆ ಕೊಡುತ್ತಿಲ್ಲ. ಇಲ್ಲಿ ನಮಗೆ ಸಾಕಷ್ಟು ಜನಪ್ರಿಯತೆ ಇದೆ. ಹಣ ಮಾತ್ರ ಇಲ್ಲ. ನಾಯಕರಿಗೆ ಕೊಡುವ ಸಂಭಾವನೆಯ ಶೇ.30 ಮಾತ್ರ ನಮಗೆ ಸಿಗುತ್ತಿದೆ. ಅದೇ ಕಾರಣದಿಂದ ಇಲ್ಲಿನ ನಾಯಕಿಯರು ಪರಭಾಷೆಗಳಲ್ಲಿ ಅವಕಾಶಗಳಿಗಾಗಿ ಯತ್ನಿಸುತ್ತಾರೆ ಎಂದಿದ್ದಾರೆ.