ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಲಯಾಳಂ ರಿಮೇಕ್ ಚಿತ್ರದಲ್ಲಿ ಉಪೇಂದ್ರ-ಪ್ರೇಮ್ ಸಂಗಮ (Upendra | Prem | Munirathna | Udayananu Tharam)
MOKSHA
ಕನ್ನಡ ಚಿತ್ರರಂಗದ ಭಿನ್ನ ನಿರ್ದೇಶಕರು ಎಂದು ದಕ್ಷಿಣ ಭಾರತದಲ್ಲೇ ಹೆಸರು ಮಾಡಿರುವ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೇಮ್ ಎಂಬ ಧ್ರುವಗಳು ಒಂದಾಗಲಿದ್ದಾರೆಯೇ? ಹೌದೆನ್ನುತ್ತವೆ ಮೂಲಗಳು. ಕನ್ನಡದ ಇಬ್ಬರು ಪ್ರತಿಭಾವಂತರು ಜತೆಯಾಗಲಿದ್ದಾರೆ ಎಂದರೆ ಯಾರು ಹೀರೋ, ಯಾರು ನಿರ್ದೇಶಕ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಮೊದಲಾಗಿ ಹೇಳುವುದೆಂದರೆ ಇವರಿಬ್ಬರೂ ಈ ಚಿತ್ರದಲ್ಲಿ ನಿರ್ದೇಶಕರಾಗಿರುವುದಿಲ್ಲ. ಇಬ್ಬರೂ ನಾಯಕರಾರಿಗುತ್ತಾರೆ. ಅದಕ್ಕಿಂತಲೂ ಹೆಚ್ಚಿನದೆಂದರೆ ಇಬ್ಬರೂ ಗೆಳೆಯರಾಗಿರುತ್ತಾರೆ. ಗೆಳೆಯರಲ್ಲಿ ನಿಜಜೀವನದಲ್ಲಿ ನಾಯಕನಾಗಿ ಹೆಸರು ಮಾಡಿದವ ನಿರ್ದೇಶಕ, ನಾಯಕನಾಗಿ ಸೋತ ನಿರ್ದೇಶಕ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂತಹ ಕಥೆಯನ್ನು 'ಎತ್ತಿ'ಕೊಳ್ಳಲಾಗಿದೆ.

ಎತ್ತಿಕೊಳ್ಳಲಾಗಿದೆ ಎಂದ ಕೂಡಲೇ ಇದು ರಿಮೇಕ್ ಎನ್ನುವುದು ಬಹುತೇಕ ಖಚಿತ. ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ, ಮೋಹನ್‌ಲಾಲ್-ಮೀನಾ ಅಭಿನಯಿಸಿದ್ದ 'ಉದಯನಾನ್ ತಾರಂ'ನ್ನು ಕನ್ನಡಕ್ಕೆ ಭಟ್ಟಿ ಇಳಿಸಲಾಗುತ್ತಿದೆ.

ನಿರ್ದೇಶಕರು ಯಾರು ಎಂಬುದು ಇನ್ನಷ್ಟೇ ನಿಗದಿಯಾಗಬೇಕಿದೆ. ನಿರ್ಮಿಸುತ್ತಿರುವುದು ಈ ಹಿಂದೆ 'ರಕ್ತಕಣ್ಣೀರು' ಮಾಡಿ ಲಾಭ ಮಾಡಿಕೊಂಡು, ಅದನ್ನು 'ಅನಾಥರು' ಮೂಲಕ ಕಳೆದುಕೊಂಡಿದ್ದ ಮುನಿರತ್ನ. ಮೂಲಗಳ ಪ್ರಕಾರ ಫೆಬ್ರವರಿ 9ಕ್ಕೆ ಮುಹೂರ್ತ ನಡೆಯಲಿದೆ. ಸಾಧು ಕೋಕಿಲಾ ಅವರೇ ಇದನ್ನು ನಿರ್ದೇಶಿಸಿದರೂ ಅಚ್ಚರಿಯಿಲ್ಲ. ಗುರುಕಿರಣ್ ಸಂಗೀತ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರೊಂದಿಗೆ ಒಂದು 'ಸೂಪರ್'ಹಿಟ್ ಚಿತ್ರವನ್ನು ನೀಡಿರುವ ಉಪೇಂದ್ರ, ಕನಿಷ್ಠ ಹತ್ತು ರಿಮೇಕ್ ಚಿತ್ರಗಳನ್ನು ನೀಡಲಿರುವುದು ಖಚಿತವಾಗುತ್ತಿದೆ. ಆದರೆ, ಗಂಭೀರ ಕತೆಯೊಂದನ್ನು ಇಬ್ಬರು 'ಗಿಮಿಕ್ ರಾಜಾ'ರೆನಿಸಿಕೊಂಡವರು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

ಉದಯನೇ ಹೀರೋ...
ಇದು 'ಉದಯನಾನ್ ತಾರಂ' (ಉದಯನೇ ಹೀರೋ) ಎಂಬ ಮಲಯಾಳಂ ಚಿತ್ರದ ಒಂದೆಳೆ ಕಥೆ. ಮೋಹನ್ ಲಾಲ್ ಮತ್ತು ಮೀನಾ ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರ 2005ರಲ್ಲಿ ಬಿಡುಗಡೆಯಾಗಿ ಭಾರೀ ದಾಖಲೆಗಳನ್ನು ಮಾಡಿತ್ತು.

ಮೋಹನ್‌ ಲಾಲ್ ಈ ಚಿತ್ರದಲ್ಲಿ ಉದಯಭಾನು ಪಾತ್ರದಲ್ಲಿ ಹಾಗೂ ಶ್ರೀನಿವಾಸನ್ (ಈ ಚಿತ್ರದ ಕಥೆ ಬರೆದವರು) ರಾಜಪ್ಪನ್/ಸರೋಜ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಅಪೂರ್ವ ಗೆಳೆಯರ ನಡುವಿನ ಕಥೆಯುಳ್ಳ ಸಿನಿಮಾವದು.

ಉದಯ ಮತ್ತು ರಾಜಪ್ಪನ್ ಇಬ್ಬರೂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕು, ನಿರ್ದೇಶಕ-ನಟನಾಗಬೇಕು ಎಂದು ಹೊರಟವರು. ಇಬ್ಬರೂ ಗೆಳೆಯರು ಬೇರೆ. ಆದರೆ ನಾಯಕನಾಗಬೇಕೆನ್ನುವ ಧಾವಂತದಲ್ಲಿ ರಾಜಪ್ಪನ್ (ಶ್ರೀನಿವಾಸನ್) ತನ್ನ ಗೆಳೆಯ ಉದಯ (ಮೋಹನ್‌ಲಾಲ್) ತಯಾರಿಸಿದ್ದ ಕಥೆಯನ್ನು ಕದ್ದು ಹೀರೋ ಆಗುತ್ತಾನೆ. ಸರೋಜ್ ಕುಮಾರ್ ಹೆಸರಲ್ಲಿ ಸೂಪರ್ ಸ್ಟಾರ್ ಆಗುತ್ತಾನೆ.

ಇದರಿಂದ ತೀವ್ರ ಆಘಾತಕ್ಕೊಳಗಾಗುವ ಉದಯ, ನಂತರ ಇನ್ನೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಾನೆ. ಅದರಲ್ಲಿ ಸರೋಜ್ ಕುಮಾರ್‌ನನ್ನೇ ನಾಯಕನನ್ನಾಗಿ ಮಾಡುವ ಅನಿವಾರ್ಯತೆ ಉದಯನಿಗೆ ಎದುರಾಗುತ್ತದೆ. ಪ್ರತಿ ಹಂತದಲ್ಲೂ ಉದಯನಿಗೆ ನಕ್ಷತ್ರಿಕನಂತೆ ಕಾಡುವ ಸರೋಜ್ ಕುಮಾರ್, ಚಿತ್ರವನ್ನು ಪೂರ್ಣ ಮಾಡಲು ಅವಕಾಶ ನೀಡುವುದಿಲ್ಲ.

ಉದಯನ ವೃತ್ತಿಜೀವನ ಇದರಿಂದ ಮತ್ತೆ ಮೇಲೇಳಬಾರದು ಎನ್ನುವುದು ಸರೋಜ್ ಕುಮಾರ್ ಉದ್ದೇಶ. ಅದಕ್ಕಾಗಿ ಚಿತ್ರವನ್ನು ಪೂರ್ತಿಗೊಳಿಸದೆ ಹೊರ ನಡೆದಿರುತ್ತಾನೆ. ಆದರೆ ಸರೋಜ್ ಕುಮಾರ್ ಇಲ್ಲದೆ ಕ್ಲೈಮಾಕ್ಸ್ ಶೂಟಿಂಗ್ ಮಾಡುವ ಉದಯ ಮಿಂಚುತ್ತಾನೆ. ನಿಜವಾದ ಸೂಪರ್ ಸ್ಟಾರ್ ನಾನಲ್ಲ, ಉದಯ ಎನ್ನುವುದನ್ನು ಕೊನೆಗೆ ಸರೋಜ್ ಕುಮಾರ್ ಒಪ್ಪಿಕೊಳ್ಳುತ್ತಾನೆ.