ಶಾರೂಖ್ ಖಾನ್ ಮಾಡಿದ್ದ ದೇವದಾಸನಿಗೂ ಈ 'ದೇವದಾಸ'ನಿಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆ, ಅದು ಬೇರೆ; ಹೀಗೆಂದು ಹೇಳಿರುವುದು ಸ್ವತಃ ನಿರ್ದೇಶಕ ಎಬಿಸಿಡಿ ಶಾಂತಕುಮಾರ್. ಲೂಸ್ ಮಾದ ಯೋಗೀಶ್ ನಾಯಕನಾಗಿರುವ ಈ ಚಿತ್ರದಲ್ಲಿ ಅವರು ದೇವದಾಸನಾಗುತ್ತಿರುವುದು ಜಿನಾಲ್ ಪಾಂಡೆ ಎಂಬ ದಂತದ ಬೊಂಬೆಗೆ.
ಶರತ್ ಚಂದ್ರ ಚಟ್ಟೋಪಾಧ್ಯಾಯರ ಕಾದಂಬರಿಯಲ್ಲಿನ ದೇವದಾಸನಂತೆ ಈ ದೇವದಾಸನೂ ಸಾರಾಯಿ ಬಾಟಲಿಯನ್ನೇ ಹಿಡಿಯುತ್ತಾನೆ. ನಾಯಿ ಜತೆಗೇ ಅಲೆದಾಡುತ್ತಾನೆ. ಆದರೆ ಈತ ಆಧುನಿಕ ದೇವದಾಸ. ಸಾಫ್ಟ್‌ವೇರ್ ಇಂಜಿನಿಯರ್. ತನ್ನ ಪ್ರೀತಿಯ ಹುಡುಗಿಯನ್ನು ಗೋಣಿಚೀಲದೊಳಗೆ ತುಂಬಿ ಸತಾಯಿಸುತ್ತಾನೆ.
ಐದು ವರ್ಷಗಳ ಹಿಂದೆಯೇ ತಾನು ಕಥೆ ಬರೆದಿದ್ದೆ ಎಂದು ನಿರ್ದೇಶಕ ಶಾಂತಕುಮಾರ್ ಹೇಳಿಕೊಂಡಿದ್ದಾರೆ. ಅವರು ಹುಡುಕುತ್ತಿದ್ದುದು ನಾಯಕನಿಗೆ. ಇದುವರೆಗೆ ಸಿಕ್ಕಿರಲಿಲ್ಲ. ಲೂಸ್ ಮಾದನನ್ನು ನೋಡಿದ ಮೇಲೆ ಆ ಚಿಂತೆ ದೂರವಾಯಿತು. ಅತ್ಯುತ್ತಮವಾಗಿ ಮೂಡಿ ಬಂದಿರುವ ಚಿತ್ರ ಇದೇ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಚಿತ್ರಕ್ಕೆ ಸಂಗೀತವನ್ನು ಜೋಶ್ವಾ ಶ್ರೀಧರ್ ಹಾಗೂ ಸಾಹಿತ್ಯ ನಾಗೇಂದ್ರ ಪ್ರಸಾದ್ ಅವರು ನೀಡಿದ್ದಾರೆ. ಚಿತ್ರದ ಹಾಡುಗಳು ಉತ್ತಮವಾಗಿ ಮೂಡಿ ಬಂದಿವೆ. ಜಿನಾಲ್ ಪಾಂಡೆ ಹಾಗೂ ನೆತಾನ್ಯ ನಾಯಕಿಯರು. ಹಣ ಹಾಕಿರುವುದು ಸ್ವಸ್ತಿಕ್ ಮುನಿರಾಜು ಮತ್ತು ಹೆಚ್.ಎಂ. ಕೃಷ್ಣಮೂರ್ತಿ.