ಪಿಯುಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೆಲ್ಲಮೆಲ್ಲನೆ ಹೆಜ್ಜೆಯನ್ನಿಕ್ಕುತ್ತಾ ಬಂದ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಆಡಿರುವ ಪ್ರಬುದ್ಧ ಮಾತಿದು. ಪರಭಾಷೆಯ ಹುಡುಗಿಯರಿಗೆ ನಮ್ಮಲ್ಲಿ ಸಾಕಷ್ಟು ಅವಕಾಶಗಳನ್ನು ಕೊಡುತ್ತಾರೆ, ನಾವ್ಯಾಕೆ ನಮ್ಮ ಭವಿಷ್ಯವನ್ನು ಬೇರೆ ಚಿತ್ರರಂಗದಲ್ಲಿ ಹುಡುಕಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
ಆ ಮೂಲಕ ಹರಿಪ್ರಿಯಾ, ಐಂದ್ರಿತಾ ರೇ, ರಾಗಿಣಿ ದ್ವಿವೇದಿ, ಪ್ರಣೀತಾ, ನಿಧಿ ಸುಬ್ಬಯ್ಯ, ಶರ್ಮಿಳಾ ಮಾಂಡ್ರೆ ಮುಂತಾದ ಕನ್ನಡತಿಯರ ಸಾಲಿಗೆ ಹರ್ಷಿಕಾ ಕೂಡ ಸೇರ್ಪಡೆಯಾಗಿದ್ದಾರೆ. ಪರಭಾಷಾ ಹುಡುಗಿಯರಿಗೆ ಕನ್ನಡದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ನಮ್ಮನ್ನು ಕಡೆಗಣಿಸಲಾಗುತ್ತಿದೆ. ಹಾಗಾಗಿ ನಾವು ಇತರ ಚಿತ್ರರಂಗಗಳತ್ತ ಗಮನ ಹರಿಸುತ್ತಿದ್ದೇವೆ ಎಂದು ಅವಕಾಶ ಸಿಕ್ಕಾಗಲೆಲ್ಲ ಕನ್ನಡದ ಹುಡುಗಿಯರು ಹೇಳುತ್ತಾ ಬಂದವರು.
ಹರ್ಷಿಕಾಗೆ ತಮಿಳಿನಲ್ಲಿ ಅವಕಾಶ ಸಿಕ್ಕಿರುವುದು ಪ್ರಶಾಂತ್ ನಿರ್ದೇಶನದ 'ಎಂಗ ವೀಟು ಪಿಳ್ಳೈ' (ನಮ್ಮನೆ ಮಗು) ಎಂಬ ಸಿನಿಮಾದಲ್ಲಿ. ಅದಕ್ಕಿಂತಲೂ ವಿಶೇಷ ಎಂದರೆ, ಇದು ನಾಯಕಿ ಪ್ರಧಾನ ಚಿತ್ರವಾಗಿರುವುದು ಮತ್ತು ಕನ್ನಡ-ತೆಲುಗು ಭಾಷೆಗಳಲ್ಲೂ ತಯಾರಾಗುತ್ತಿರುವುದು.
ಈ ಬಗ್ಗೆ ಮಾತಿಗಿಳಿದ ಹರ್ಷಿಕಾ, 'ಕನ್ನಡ ಸಿನಿಮಾಗಳಲ್ಲಿ ಪರಭಾಷಾ ನಟಿಯರಿಗೆ ಹೆಚ್ಚು ಪಾತ್ರಗಳು ಸಿಗುತ್ತಿವೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಹಾಗಾಗಿ ನಾವು, ಕನ್ನಡದ ಹುಡುಗಿಯರು ಇತರ ಚಿತ್ರರಂಗಗಳಲ್ಲಿ ಯಾಕೆ ಗುರುತಿಸಿಕೊಳ್ಳಬಾರದು? ನಮ್ಮ ಸಾಮರ್ಥ್ಯವನ್ನು ಯಾಕೆ ಸಾಬೀತುಪಡಿಸಬಾರದು' ಎಂದು ಪ್ರಶ್ನಿಸಿದರು.
ಆದರೂ ಆಕೆಗೆ ಕನ್ನಡದಲ್ಲಿ ಅವಕಾಶಗಳೇನೂ ಕಡಿಮೆ ಎಂಬ ಭಾವನೆಯೇನೂ ಇಲ್ಲ. ಅಜಯ್ ರಾವ್ ಮತ್ತು ಜಗ್ಗೇಶ್ ಪುತ್ರನ ಜತೆಗಿನ ಸಿನಿಮಾ ಕುರಿತ ಮಾತುಕತೆ ನಡೆಯುತ್ತಿದೆ. ತರಾತುರಿಯಲ್ಲಿ ಸಿಕ್ಕಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಬೇಕಿಲ್ಲ. ಜನರ ಮನಸ್ಸಿನಲ್ಲಿ ಮುದ್ದು ಹುಡುಗಿಯಾಗಿಯೇ ಉಳಿದುಕೊಳ್ಳಬೇಕು, ಉತ್ತಮ ನಟಿ ಎಂದು ಹೇಳಿಸಿಕೊಳ್ಳಬೇಕು ಎಂಬ ಆಸೆಯಿರುವುದರಿಂದ ನಿಧಾನವೇ ಪ್ರಧಾನ ಇಷ್ಟವಂತೆ.
ಹರ್ಷಿಕಾಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಖುಷಿ ಕೊಟ್ಟಿರುವುದು ಜಾಕಿ ಚಿತ್ರ. ಇದರಲ್ಲಿ ಭಾವನಾ ನಾಯಕಿಯಾಗಿದ್ದರೂ, ಎಲ್ಲರ ಮೆಚ್ಚುಗೆ ಕೊಡಗಿನ ಹುಡುಗಿಯ ಮೇಲಂತೆ. ಹಾಗಂತ ಸ್ವತಃ ಆಕೆಯೇ ಹೇಳಿಕೊಂಡಿದ್ದಾರೆ.
ಎರಡು ಭಿನ್ನ ಚಿತ್ರಗಳಲ್ಲಿ ಈಗಾಗಲೇ ನಟಿಸಿಯಾಗಿದೆ. ಒಂದು '5 ಈಡಿಯೆಟ್ಸ್'. ಇನ್ನೊಂದು 'ಮುರಳಿ ಮೀಟ್ಸ್ ಮೀರಾ'. ಇತ್ತೀಚಿನ ದಿನಗಳಲ್ಲಿ ಕ್ಯಾಮರಾ ಮುಂದೆ ಅತ್ತದ್ದು ಹೆಚ್ಚಾಗಿದೆ. ಹಾಗಾಗಿ ಕಾಮಿಡಿ ವಿಭಾಗದಲ್ಲಿ ಕೈ ಹಾಕಿದ್ದೇನೆ ಎಂದಿದ್ದಾರೆ.
ಹಾಗಿದ್ರೆ ಐವರು ಈಡಿಯೆಟ್‌ಗಳಲ್ಲಿ ನೀವೂ ಒಬ್ಬರೆಂದ ಹಾಗಾಯ್ತು ಎಂದು ಪ್ರಶ್ನಿಸಿದರೆ, ಸಾಧ್ಯವೇ ಇಲ್ಲ. ನಾನು ಈಡಿಯೆಟ್ ಅಲ್ಲ ಎಂದು ನಗುತ್ತಾ ಜಾರಿಕೊಂಡರು.