ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೈಕಲ್ ಬಳಸಿ, ಪರಿಸರ ಉಳಿಸಿ; ರಾಧಿಕಾ ಪಂಡಿತ್ ಸ್ಲೋಗನ್
(Radhika Pandit | Krishnan Love Story | Gana Bajana | Kannada Actress)
ಸೈಕಲ್ ಬಳಸಿ, ಪರಿಸರ ಉಳಿಸಿ; ರಾಧಿಕಾ ಪಂಡಿತ್ ಸ್ಲೋಗನ್
MOKSHA
ಇತ್ತೀಚೆಗಷ್ಟೇ ಸೈಕ್ಲಥಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮೋಹಕ ನಟಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಶುಭ ಸಂದೇಶ ನೀಡಿದ್ದು, ಸೈಕಲ್ ಬಳಸಿ, ಪರಿಸರ ರಕ್ಷಿಸಿ ಎಂದು ಕರೆ ನೀಡಿದ್ದಾರೆ.
ಶೋಕಿ ಜೀವನಕ್ಕೆ ಒಗ್ಗಿಕೊಳ್ಳುವ ಯುವ ಜನತೆ ಸೈಕಲ್ಲಿಗಿಂತ ಬೈಕೇ ವಾಸಿ ಎಂದುಕೊಳ್ಳುತ್ತಿರುವ ಹೊತ್ತಿನಲ್ಲಿ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಉತ್ತಮವೆನಿಸುವ ಸೈಕಲ್ ಬಳಸುವುದು ಉತ್ತಮ ಎಂದಿರುವ 'ಮೊಗ್ಗಿನ ಮನಸು' ಹುಡುಗಿಗೆ ಸೈಕ್ಲಿಂಗ್ ಮಾಡೋದಿಕ್ಕೆ ಸಮಯಾನೇ ಸಿಗ್ತಿಲ್ವಂತೆ. ಆದರೂ ಸಮಯ ಸಿಕ್ಕಾಗಲೆಲ್ಲ ಬಳಸುತ್ತೇನೆ ಎಂದು ನುಲಿದಿದ್ದಾರೆ.
ಜವಾಬ್ದಾರಿಯುತ ನಾಗರಿಕರಾಗಿರುವ ನಾವು ಪರಿಸರ ಸಂರಕ್ಷಣೆಗಾಗಿ ಚಿಕ್ಕಚಿಕ್ಕ ಹೆಜ್ಜೆಗಳನ್ನಿಟ್ಟರೂ ಸಾಕಾಗುತ್ತದೆ. ಸುಂದರ ನಗರಿ ಬೆಂಗಳೂರಿನಲ್ಲಿ ಸೈಕಲ್ ಓಡಿಸುವವರ ಸಂಖ್ಯೆ ಹೆಚ್ಚಾಗಬೇಕು. ದೈಹಿಕ ವ್ಯಾಯಾಮ ಮಾಡಲು ಸಮಯ ಇಲ್ಲದವರಿಗೆ ಸೈಕಲ್ ಪ್ರಯಾಣ ಉತ್ತಮ. ಆದರೆ ನನಗೆ ಇದು ಸಾಧ್ಯವಾಗುತ್ತಿಲ್ಲ. ಆದರೂ ಕೆಲವೊಮ್ಮೆ ಸೈಕಲ್‌ನಲ್ಲೇ ಜಿಮ್‌ಗೆ ಹೋಗುವುದಿದೆ. ಪ್ರತಿದಿನ ಬೆಳಿಗ್ಗೆ ಜಿಮ್‌ನಲ್ಲಿ ಸೈಕ್ಲಿಂಗ್ ಮಾಡುತ್ತೇನೆ - ಇದು ಅವರ ಪ್ರಾಮಾಣಿಕ ಮಾತು.
2010ರ ವರ್ಷದಲ್ಲಿ ಕೃಷ್ಣನ್ ಲವ್ ಸ್ಟೋರಿ ಮತ್ತು ಗಾನ ಬಜಾನಾದಂತಹ ಗುಣಮಟ್ಟದ ಚಿತ್ರಗಳನ್ನು ನೀಡಿರುವ ರಾಧಿಕಾ ಪಂಡಿತ್‌ಗೆ 2011 ಕೂಡ ಅದೇ ರೀತಿಯಾಗುವ ವಿಶ್ವಾಸವಿದೆ. ಒಂದಷ್ಟು ಚಿತ್ರಗಳು ಕೈಯಲ್ಲಿವೆ. ವರ್ಷ ಪೂರ್ತಿ ಬ್ಯುಸಿಯಾಗುವಷ್ಟು ಚಿತ್ರಗಳಿವೆಯಂತೆ.
ಸಿನಿಮಾಕ್ಕಿಂತ ಹೆಚ್ಚು ಪರಿಸರ ಕುರಿತ ಕಾಳಜಿಯನ್ನೇ ಒತ್ತಿ ಹೇಳಿದ ಅವರು, ನಾನು ನನ್ನಿಂದ ಸಾಧ್ಯವಾಗುವ ರೀತಿಯಲ್ಲಿ, ನನ್ನದೇ ಹಾದಿಯಲ್ಲಿ ಪರಿಸರಕ್ಕೆ ಕೊಡುಗೆ ನೀಡಲು ಯತ್ನಿಸುತ್ತಿದ್ದೇನೆ. ಗಿಡಗಳನ್ನು ನೆಡುವುದು, ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ಮತ್ತು ಪ್ರೋತ್ಸಾಹ ನೀಡುವುದು ಮುಂತಾದುವುಗಳನ್ನು ಮಾಡುತ್ತಿದ್ದೇನೆ.
ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣ ವಾಯುಮಾಲಿನ್ಯ ಆಗುತ್ತಿರುವುದರಿಂದ ಇಂತಹ ಕ್ರಮಗಳು ಕೊಂಚ ನಿರಾಳತೆ ಒದಗಿಸಬಲ್ಲವು. ನನಗೆ ಸಮಯದ ಆಯ್ಕೆ ಇದೆ ಎಂಬ ಹೊತ್ತಿನಲ್ಲಿ, ಹತ್ತಿರದ ಸ್ಥಳಗಳಿಗೆ ಹೋಗಬೇಕೆಂದರೆ ಸೈಕಲ್ ನನ್ನ ಪ್ರಥಮ ಆದ್ಯತೆಯಾಗಿರುತ್ತದೆ. ನೀವೂ ಅದೇ ಹಾದಿಯಲ್ಲಿ ಸಾಗಿ. ಪರಿಸರ ಉಳಿಸಿ, ಬೆಳೆಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ ಎಂದು ಸಲಹೆ ನೀಡಿದ್ದಾರೆ.