ಇಬ್ಬರ ಜಗಳ ಮೂರನೇಯವನಿಗೆ ಲಾಭ. ಇದು ಹಳೇ ನಾಣ್ಣುಡಿ. ಆದರೆ ಇಲ್ಲಿ ಇಬ್ಬರು ನಿರ್ಮಾಪಕರ ಜಗಳದಿಂದ ಮೂರನೇಯವರು ಸಂಕಷ್ಟ ಎದುರಿಸಬೇಕಾದ ಸ್ಥಿತಿ ಎದುರಾಗಿದೆ.
ವಿಷಯ ಇಷ್ಟೆ, ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ, ಅತ್ಯುತ್ತಮ ವಿಮರ್ಶೆ ಪಡೆದುಕೊಂಡಿದ್ದ, ಯಶ್ ಮತ್ತು ಭಾಮ ನಟಿಸಿರುವ 'ಮೊದಲಾ ಸಲ' ಚಿತ್ರ ಒಂದೆಡೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಆದರೆ ಇತ್ತ ನಿರ್ಮಾಪಕರಾದ ಯೋಗೇಶ್ ನಾರಾಯಣ್ ಮತ್ತು ಮಲ್ಲಿಕಾರ್ಜುನ ನಡುವೆ ವ್ಯವಹಾರದಲ್ಲಿ ವೈರತ್ವ ಎದುರಾಗಿದೆ.
ಈ ಬೆಳವಣಿಗೆಯಿಂದ ತೊಂದರೆಗೆ ಸಿಲುಕಿರುವುದು ವಿತರಕ ಜಯಣ್ಣ. ಅವರು ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಬೆಂಗಳೂರಿನ ಕಪಾಲಿ ಹಾಗೂ ಇತರ ಚಿತ್ರಮಂದಿರಗಳಲ್ಲಿ ಮೊದಲಾ ಸಲ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಚಿತ್ರಕ್ಕೆ ನಿರ್ಮಾಪಕ ಯೋಗೇಶ್ ಹೆಚ್ಚು ಹಣವನ್ನು ತೊಡಗಿಸಿದ್ದರೂ, ಮತ್ತೊಬ್ಬ ನಿರ್ಮಾಪಕ ಮಲ್ಲಿಕಾರ್ಜುನ ಒಬ್ಬರೇ ಚಿತ್ರದ ವಿತರಕರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ಅಲ್ಲದೆ ಲಾಭ-ಲೆಕ್ಕಾಚಾರವನ್ನೂ ತಿಳಿಸುತ್ತಿಲ್ಲ. ಚಿತ್ರತಂಡದೊಂದಿಗೆ ಪ್ರಚಾರಕ್ಕೂ ತೆರಳುತ್ತಿದ್ದಾರೆ. ಚಿತ್ರದ ಯಶಸ್ಸಿಗೆ ತಾನೊಬ್ಬನೇ ಕಾರಣ ಎನ್ನುವಂತೆ ಬಿಂಬಿಸುತ್ತಿದ್ದಾರೆ ಎಂದು ಯೋಗೇಶ್ ಆರೋಪಿಸಿದ್ದಾರೆ.
ಚಿತ್ರ ನಿರ್ಮಾಪಕರ ಜಗಳ ತಾರಕಕ್ಕೇರಿದೆ. ಈಗಾಗಲೇ ಪ್ರಕರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ತಲುಪಿದೆ. ಶೀಘ್ರದಲ್ಲೇ ಸಮಸ್ಯೆ ಪರಿಹಾರ ಕಾಣಬಹುದು ಎಂದು ನಿರೀಕ್ಷಿಸಲಾಗುತ್ತಿದೆ.