ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣುವರ್ಧನ್ ಯಾವುದರಲ್ಲಿ ಕಡಿಮೆ? ಪದ್ಮ ಪ್ರಶಸ್ತಿ ಯಾಕಿಲ್ಲ? (Kajol | Girish Kasaravalli | Padma award | Vishnuvardhan)
ಇಂತಹ ಗಂಭೀರ ಪ್ರಶ್ನೆಯನ್ನು ಮೊತ್ತ ಮೊದಲು ಎತ್ತಿರುವುದು ಕನ್ನಡದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಕನ್ನಡಿಗರ ಆಸ್ತಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಬದುಕಿದ್ದಾಗ ಯಾವುದೇ ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲವಾದರೂ, ಅವರಿಗೆ ರಾಷ್ಟ್ರದ ಉನ್ನತ ಪ್ರಶಸ್ತಿಗಳು ಯಾಕೆ ಸಂದಿಲ್ಲ? ಪದ್ಮಶ್ರೀ ಪಡೆದಿರುವ ಬಾಲಿವುಡ್ ನಟಿ ಕಾಜೋಲ್‌ಗಿಂತ ನಮ್ಮ ವಿಷ್ಣು ಯಾವುದರಲ್ಲಿ ಕಡಿಮೆ ಎಂದು ಪ್ರಶ್ನಿಸಿದ್ದಾರೆ.

ಹೌದಲ್ವ. ತಬೂ, ಇರ್ಫಾನ್ ಖಾನ್, ಸೈಫ್ ಆಲಿ ಖಾನ್ ಮುಂತಾದ ಚಿಲ್ಲರೆಗಳಿಗೆ ಕರೆದು ಪ್ರಶಸ್ತಿಗಳನ್ನು ಕೊಡುವ ಕೇಂದ್ರ ಸರಕಾರವು, ಕನ್ನಡ ಚಿತ್ರರಂಗವನ್ನು ಯಾಕೆ ನಿರ್ಲಕ್ಷಿಸುತ್ತಿದೆ? ನಿಜಕ್ಕೂ ಸರಕಾರವು ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆಯೇ ಅಥವಾ ನಮ್ಮ ರಾಜ್ಯ ಸರಕಾರವು ಪ್ರಶಸ್ತಿ ಕೊಡಿಸುವಲ್ಲಿ ಸಮರ್ಥನೀಯ ಕಾರಣಗಳನ್ನು ನೀಡುತ್ತಿಲ್ಲವೇ? ನಮ್ಮದೇ ರಾಜ್ಯದ, ಕೇಂದ್ರದಲ್ಲಿರುವ ಸಚಿವರು ಏನು ಮಾಡುತ್ತಿದ್ದಾರೆ? ಇಂತಹ ಹಲವು ಪ್ರಶ್ನೆಗಳನ್ನು ಎತ್ತಬಹುದಾಗಿದೆ.
PR

ಯಾಕೆಂದರೆ ನಮ್ಮ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳನ್ನೇ ಗಮನಕ್ಕೆ ತೆಗೆದುಕೊಂಡರೆ, ಅಲ್ಲಿ ವಿವೇಕ್, ವಡಿವೇಲು ಅವರಂತಹ ಹಾಸ್ಯ ನಟರಿಗೂ ಪದ್ಮ ಪ್ರಶಸ್ತಿಗಳು ಸಲ್ಲುತ್ತವೆ. ಆದರೆ ನಮ್ಮಲ್ಲಿ ಹಾಗಲ್ಲ. ಏನೇ ಕಸರತ್ತು ಮಾಡಿದರೂ ಪ್ರಶಸ್ತಿಗಳು ಅವರ ಹತ್ತಿರ ಸರಿಯುತ್ತಿಲ್ಲ.

ಇಲ್ಲದೇ ಇದ್ದರೆ, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದ ವಿಷ್ಣುವರ್ಧನ್‌ಗೆ ಕನಿಷ್ಠ ಮರಣೋತ್ತರವಾಗಿಯಾದರೂ ಪ್ರಶಸ್ತಿ ಸಿಗಬೇಕಿತ್ತು. 2009ರಲ್ಲಿ ಅವರು ತೀರಿಕೊಂಡ ನಂತರ 2010ರಲ್ಲಿ ಹಾಗೂ ಈ ವರ್ಷ -- ಎರಡು ಬಾರಿಯೂ ಕರ್ನಾಟಕ ಸರಕಾರವು ಪ್ರಶಸ್ತಿಗೆ ವಿಷ್ಣು ಹೆಸರನ್ನು ನಾಮಕರಣ ಮಾಡಿತ್ತು. ಆದರೆ ಅದನ್ನು ಕೇಂದ್ರ ಕ್ಯಾರೇ ಅಂದಿಲ್ಲ. ವಿಷ್ಣುವರ್ಧನ್‌ಗೆ ಪ್ರಶಸ್ತಿ ನೀಡಲೇಬೇಕು ಎಂದು ರಾಜ್ಯ ಸರಕಾರವು ಪಟ್ಟಿಗೆ ಬಿದ್ದಿಲ್ಲ ಎನ್ನುವುದು ಈ ಮೂಲಕ ಸ್ಪಷ್ಟವಾಗಿದೆ.

ನಂಬಿದರೆ ನಂಬಿ, ಕನ್ನಡ ಚಿತ್ರರಂಗಕ್ಕೆ ಪದ್ಮ ಪ್ರಶಸ್ತಿ ಸಿಗದೆ ಬರೋಬ್ಬರಿ 27 ವರ್ಷಗಳೇ ಆಗಿ ಹೋಗಿದ್ದವು, 2010ರವರೆಗೆ. ಅದನ್ನೀಗ ನೀಗಿಸಿದ್ದು ಗಿರೀಶ್ ಕಾಸರವಳ್ಳಿ. ಅವರಿಗೆ ಕರ್ನಾಟಕದ ಶಿಫಾರಸಿನ ಮೇಲೆ ಪದ್ಮಶ್ರೀ ಪುರಸ್ಕಾರ ಪ್ರಕಟಿಸಲಾಗಿದೆ. ಇದಕ್ಕೂ ಮೊದಲು ಪದ್ಮ ಪ್ರಶಸ್ತಿ ಪಡೆದದ್ದು ಕನ್ನಡ ಚಿತ್ರರಂಗದ ಬೆನ್ನೆಲುಬಾಗಿದ್ದ ವರನಟ ಡಾ. ರಾಜ್‌ಕುಮಾರ್. ಅವರು 1983ರಲ್ಲಿ ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದರು.

ಈ 27 ವರ್ಷಗಳ ನಡುವೆ ಕನ್ನಡ ಚಿತ್ರರಂಗದ ಕಲಾವಿದರು ಅಥವಾ ತಂತ್ರಜ್ಞರಿಗೆ ಪದ್ಮ ಪ್ರಶಸ್ತಿ ಸಂದಿಲ್ಲ ಎಂದು ಸಾರಾಸಗಟಾಗಿ ಹೇಳುವಂತಿಲ್ಲ. ಯಾಕೆಂದರೆ 1992ರಲ್ಲಿ ಬಿ. ಸರೋಜಾ ದೇವಿಯವರು ಪದ್ಮಭೂಷಣ ಪುರಸ್ಕಾರ ಪಡೆದಿದ್ದರು. ಆದರೆ ಅವರ ಹೆಸರನ್ನು ಪ್ರಶಸ್ತಿಗೆ ನಾಮಕರಣಗೊಳಿಸಿದ್ದು ತಮಿಳುನಾಡು ಸರಕಾರ.

ಇರುವ ಇನ್ನೆರಡು ಅಪವಾದಗಳು ಆರುಂಧತಿ ನಾಗ್ (2010ರಲ್ಲಿ ಪದ್ಮಶ್ರೀ) ಮತ್ತು ಗಿರೀಶ್ ಕಾರ್ನಾಡ್ (1974ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ). ಇವರಿಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಹೌದಾದರೂ, ಇಷ್ಟಕ್ಕೇ ಅವರ ಸಾಧನೆಗಳು ಸೀಮಿತವಲ್ಲ.

ಇನ್ನು ಶ್ರೇಷ್ಠಾತಿಶ್ರೇಷ್ಠರೆಂದು ನಾವು, ಕನ್ನಡಿಗರು ಗುರುತಿಸುವ ಪುಟ್ಟಣ್ಣ ಕಣಗಾಲ್, ಚಿ. ಉದಯಶಂಕರ್, ಜಿ.ವಿ. ಅಯ್ಯರ್, ಶಂಕರ್‌ನಾಗ್, ನರಸಿಂಹರಾಜು, ವಜ್ರಮುನಿ, ಅಶ್ವತ್ಥ್, ಅಂಬರೀಷ್, ಜಯಂತಿ, ಅನಂತ್ ನಾಗ್, ನಾಗಾಭರಣ, ಹಂಸಲೇಖ, ರವಿಚಂದ್ರನ್ -- ಈ ಪಟ್ಟಿ ಉದ್ದುದ್ದಕ್ಕೆ ಬೆಳೆಯುತ್ತದೆ.

ಇವರಲ್ಲಿ ಕೆಲವರು ಈಗಾಗಲೇ ಕಾಲವಾಗಿದ್ದಾರೆ. ಆದರೂ ಕನಿಷ್ಠ ಮರಣೋತ್ತರವಾಗಿಯಾದರೂ ನೀಡಬಹುದಿತ್ತು. ಇದುವರೆಗೆ ನೀಡಿಲ್ಲ. ಮುಂದಿನ ದಿನಗಳಲ್ಲಿಯೂ ಸರಕಾರದ ಮತ್ತು ಕೇಂದ್ರದಲ್ಲಿರುವ ರಾಜ್ಯದ ನಾಯಕರ ಧೋರಣೆಯಲ್ಲಿ ಬದಲಾವಣೆಯನ್ನು ನಿರೀಕ್ಷಿಸುವುದು ಬಹುಶಃ ತಪ್ಪೆಂದೇ ಅನ್ನಿಸುತ್ತಿದೆ.

ಕಾಸರವಳ್ಳಿ ಏನಂತಾರೆ?
ಕನ್ನಡ ಚಿತ್ರರಂಗ ಮತ್ತು ಇತರ ಚಿತ್ರರಂಗಗಳಿಗೆ ನೀಡಿದ ಕೊಡುಗೆಗಳಿಗಾಗಿ ಪ್ರಶಸ್ತಿ ಪಡೆದವರ ಹೆಸರುಗಳನ್ನು ಗಮನಿಸಿದಾಗ, ಇಲ್ಲಿ ಸಾಕಷ್ಟು ಅಸಮಾನತೆ ಕಂಡು ಬರುತ್ತದೆ. ಕರ್ನಾಟಕದಲ್ಲಿ ಪ್ರಶಸ್ತಿಗೆ ಅರ್ಹವೆನಿಸಿದ ಹಲವು ಮಂದಿ ಸಾಧಕರು ಇದ್ದರು, ಇದ್ದಾರೆ.

ಪುಟ್ಟಣ್ಣ ಕಣಗಾಲ್, ಜಿ.ವಿ. ಅಯ್ಯರ್, ಬಿ.ಎಸ್. ರಂಗಾ, ಅಶ್ವತ್ಥ್, ವಿಷ್ಣುವರ್ಧನ್, ಜಯಂತಿ ಮುಂತಾದವರಿಗೆ ಯಾವತ್ತೋ ಪ್ರಶಸ್ತಿ ಸಿಗಬೇಕಾಗಿತ್ತು. ನನ್ನ ಪ್ರಕಾರ ಪ್ರಶಸ್ತಿ ಸಿಗದೇ ಇರಲು ಕಾರ್ಣ ನಮ್ಮ ರಾಜ್ಯ ಸರಕಾರ. ಸೂಕ್ತವಾಗಿ ನಾಮಕರಣಗೊಳಿಸದೇ ಇರುವುದು ಮತ್ತು ಪ್ರಶಸ್ತಿಯ ಆಯ್ಕೆ ಸಮಿತಿಗೆ ಮನದಟ್ಟು ಮಾಡುವಲ್ಲಿ ವಿಫಲವಾಗಿರುವುದರಿಂದ ನಾವು ಪ್ರಶಸ್ತಿಯಿಂದ ವಂಚಿತರಾಗಿದ್ದೇವೆ ಎಂದೆನಿಸುತ್ತದೆ ಎಂದು ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಸರಕಾರವೇ ಕಾರಣ: ದ್ವಾರಕೀಶ್
ತಮಿಳಿನ ಹಾಸ್ಯನಟ ವಿವೇಕ್ ಉದ್ಯಮಕ್ಕೆ ಬಂದದ್ದು 12 ವರ್ಷಗಳ ಹಿಂದೆ. ಅವರಿಗೆ ಪದ್ಮಶ್ರೀ ಸಿಕ್ಕಿದೆ. ಆದರೆ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ತಾಯಿ ನಾಗೇಶ್‌ಗೆ ಸಿಗಲಿಲ್ಲ.

ಇದನ್ನೇ ಕನ್ನಡಕ್ಕೆ ಹೋಲಿಸಿದಾಗ, ನಮ್ಮ ಸರಕಾರದ ಬಗ್ಗೆ ತೀರಾ ರೇಜಿಗೆ ಹುಟ್ಟುತ್ತದೆ. ಪುಟ್ಟಣ್ಣ ಕಣಗಾಲ್ ಅಥವಾ ಸಿದ್ಧಲಿಂಗಯ್ಯನಂತವರಿಗೇ ಈ ಪ್ರಶಸ್ತಿ ಸಂದಿಲ್ಲ. ನಾವು ಚಿತ್ರರಂಗದ ಮಂದಿ ಕೇಂದ್ರಕ್ಕೆ ಹೋಗಿ, ನಮಗೆ ಪ್ರಶಸ್ತಿ ಕೊಡಿ ಎಂದು ಕೇಳಲು ಸಾಧ್ಯವಿಲ್ಲ. ಇದನ್ನು ಮಾಡಬೇಕಾಗಿರುವುದು ಕರ್ನಾಟಕ ಸರಕಾರ ಎಂದು ಹಿರಿಯ ನಿರ್ದೇಶಕ-ನಿರ್ಮಾಪಕ-ನಟ ದ್ವಾರಕೀಶ್ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಲೇಖನಗಳು