ನಟಿ ರಂಜಿತಾ ಜತೆಗಿನ ರಾಸಲೀಲೆಯಲ್ಲಿ ಭಾರೀ ಸುದ್ದಿಯಾಗಿದ್ದ ಬಿಡದಿ ನಿತ್ಯಾನಂದ ಸ್ವಾಮಿ ಕುರಿತು ತೆಲುಗಿನಲ್ಲಿ ನಿರ್ಮಾಣವಾಗಿರುವ 'ಅಯ್ಯಾರೆ' ಎಂಬ ಚಿತ್ರಕ್ಕೆ ಪ್ರಮಾಣ ಪತ್ರವನ್ನು ನೀಡದಂತೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಪ್ರಾದೇಶಿಕ ಚಲನಚಿತ್ರ ಸೆನ್ಸಾರ್ ಮಂಡಳಿಗೆ ಆದೇಶ ನೀಡಿದೆ.
ಹಿರಿಯ ನಟ ರಾಜೇಂದ್ರ ಪ್ರಸಾದ್ ಈ ಚಿತ್ರದಲ್ಲಿ ನಿತ್ಯಾನಂದ ಸ್ವಾಮಿಯ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿ ಕಾಮಿಸ್ವಾಮಿಯ ಸೆಕ್ಸ್ ಹಗರಣದ ಪ್ರಸ್ತಾಪವಿದೆ ಎಂದು ಹೇಳಲಾಗಿತ್ತು.
PR
ಇದರ ವಿರುದ್ಧ ನಿತ್ಯಾನಂದ ಸ್ವಾಮಿ ವಕೀಲರು ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಲ್. ನರಸಿಂಹ ರೆಡ್ಡಿ, ಸೆನ್ಸಾರ್ ಪ್ರಮಾಣ ಪತ್ರ ನೀಡದಂತೆ ಆದೇಶ ಹೊರಡಿಸಿದರು. ಅಲ್ಲದೆ, ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಚಿತ್ರದ ನಿರ್ಮಾಪಕರಿಗೆ ನೋಟೀಸ್ ಜಾರಿ ಮಾಡಿದರು.
ನಿತ್ಯಾನಂದ ಸ್ವಾಮಿಯವರ ಗೌರವಕ್ಕೆ ಹಾನಿ ಮಾಡುವ ಉದ್ದೇಶವನ್ನು 'ಅಯ್ಯಾರೆ' ಸಿನಿಮಾ ಹೊಂದಿದೆ ಎಂದು ಪದ್ನು ಶೈಲೇಂದ್ರ ಎಂಬ ವಕೀಲರು ಆಂಧ್ರಪ್ರದೇಶ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಚಿತ್ರದ ಕಥೆ, ಪಾತ್ರಗಳನ್ನು ನೋಡುವಾಗ ಇದು ನಿತ್ಯಾನಂದ ಸ್ವಾಮಿಯವರನ್ನು ಅವಹೇಳನ ಮಾಡಲು, ಅವರ ಘನತೆಗೆ ಮಸಿ ಬಳಿಯಲು ಮಾಡಿರುವ ಯತ್ನ ಎಂಬುದು ಕಂಡು ಬರುತ್ತದೆ. ಹಾಗಾಗಿ ಈ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಚಿತ್ರದಲ್ಲಿ ರಾಜೇಂದ್ರ ಪ್ರಸಾದ್ ತಾನು ನಿತ್ಯಾನಂದ ಸ್ವಾಮಿಯಂತೆ ವೇಷ ಧರಿಸಿರುವುದು ಸ್ಪಷ್ಟ ಎಂದು ತಿಳಿಸಿದ ಅರ್ಜಿದಾರ ಶೈಲೇಂದ್ರ, ಸಂಬಂಧಪಟ್ಟ ಫೋಟೋಗಳು ಮತ್ತು ವೀಡಿಯೋ ತುಣುಕುಗಳು ಹಾಗೂ ಇದು ನಿತ್ಯಾನಂದ ಸ್ವಾಮಿಯ ಹಗರಣದ ಕುರಿತಾದ ಚಿತ್ರ ಎಂದು ನಿರ್ದೇಶಕರು ಹೇಳಿರುವ ಮಾಧ್ಯಮ ವರದಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.