ಮೊದಲ ಏಟಿನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜತೆ ನಾಯಕಿಯಾಗಿ ನಟಿಸಿದ್ದ ಚಿಕ್ಕಮಗಳೂರು ಹುಡುಗಿ ದೀಪಾ ಸನ್ನಿಧಿಗೆ ಈಗ ಬಂಪರ್ ಅನುಭವ. ಹೌದು, ಯೋಗರಾಜ್ ಭಟ್ ನಿರ್ದೇಶನದ 'ಪರಮಾತ್ಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ಆಯ್ಕೆಯಾಗಿರುವುದು ಸಖತ್ ಖುಷಿ ಕೊಟ್ಟಿದೆಯಂತೆ.
PR
ಇತರ ಹೀರೋಯಿನ್‌ಗಳಿಗೆ ಹೋಲಿಸಿದರೆ, ನಾನು ಅದೃಷ್ಟವಂತೆ. ಆರಂಭದಲ್ಲೇ ಈ ರೀತಿಯಾಗಿ ದೊಡ್ಡ ದೊಡ್ಡ ಹೀರೋಗಳ ಜತೆ ನಟಿಸುವ ಅದೃಷ್ಟ ಹೆಚ್ಚಿನವರಿಗೆ ಸಿಕ್ಕಿಲ್ಲ ಎಂದು ಕಿಲಕಿಲ ನಗು ಹರಡಿದ್ದಾರೆ.
ಅಷ್ಟಕ್ಕೂ ದೀಪಾರ ಮೊದಲ ಚಿತ್ರ 'ಸಾರಥಿ' ಇನ್ನೂ ತೆವಲುತ್ತಾ ಸಾಗುತ್ತಿದೆ. ಚಿತ್ರೀಕರಣವೇ ಪೂರ್ಣಗೊಂಡಿಲ್ಲ. ಆದರೆ ನಾಯಕಿಯ ಪ್ರಕಾರ ಫೆಬ್ರವರಿ ಅಂತ್ಯದ ಹೊತ್ತಿಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ.
ವಿಳಂಬಕ್ಕೆ ಕಾರಣ ಏನೆಂಬುದು ನನಗೆ ಗೊತ್ತಿಲ್ಲ. ನಿರ್ಮಾಣದ ಜವಾಬ್ದಾರಿ ನನಗೆ ಸಂಬಂಧಪಟ್ಟದ್ದಲ್ಲ. ನನ್ನ ಕೆಲಸ ನಟಿಸುವುದು. ಅದನ್ನು ಮಾಡಿದ್ದೇನೆ ಎನ್ನುವ ದೀಪಾ, ಆ ಚಿತ್ರ ಬಿಡುಗಡೆಯಾಗುವ ಮೊದಲು ಬೇರೆ ಚಿತ್ರ ಒಪ್ಪಿಕೊಳ್ಳಬಾರದು ಎಂದು ನಿರ್ದೇಶಕ ದಿನಕರ ತೂಗುದೀಪ್ ಷರತ್ತು ಹಾಕಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾರೆ.
ಅಂತಹಾ ಯಾವುದೇ ಒಪ್ಪಂದಗಳಿಲ್ಲ. 'ಪರಮಾತ್ಮ' ಚಿತ್ರಕ್ಕೆ ಆಯ್ಕೆಯಾದಾಗಲೂ, ನಾನು ನನ್ನ ಮೊದಲ ಚಿತ್ರದ ನಿರ್ದೇಶಕ-ನಿರ್ಮಾಪಕರ ಜತೆ ಮಾತುಕತೆ ನಡೆಸಿದ್ದೇನೆ. ಭಟ್ರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ದೊಡ್ಡ ಬ್ಯಾನರ್ ಬೇರೆ ಎನ್ನುವ ದೀಪಾ, ಕಿಚ್ಚ ಸುದೀಪ್ ಜತೆಗಿನ ಅವಕಾಶವನ್ನು ಮಿಸ್ ಮಾಡಿಕೊಂಡಿರುವುದು ದುರದೃಷ್ಟಕರ ಎಂದಿದ್ದಾರೆ.
ಖಂಡಿತಾ ಮುಂದಿನ ಬಾರಿ ಅಂತಹ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತೇನೆ ಎಂದು 'ಸಾರಥಿ'ಯಿಂದಾಗಿ ತಪ್ಪಿದ ಅವಕಾಶದ ಕುರಿತು ಹೇಳಿಕೊಂಡರು.
ಭಟ್ಟರ ಚಿತ್ರದಲ್ಲಿ ಇನ್ನಿಬ್ಬರು ನಾಯಕಿಯರಿದ್ದಾರೆ. ಆದರೆ ದೀಪಾ ಪ್ರಕಾರ ಅವರೇ ಪ್ರಮುಖ ನಾಯಕಿ. ಹಾಗೆಂದು ನಿರ್ದೇಶಕರು ಹೇಳಿದ್ದಾರಂತೆ. ಇತರ ಇಬ್ಬರು ನಾಯಕಿಯರು ಯಾರೆನ್ನುವುದು ದೀಪಾಗೆ ಇದುವರೆಗೂ ಗೊತ್ತಾಗಿಲ್ಲ. ಇದರ ಚಿಂತೆಯೂ ದೀಪಾಗಿಲ್ಲ. ಯಾಕೆಂದರೆ ನಾನು ಈಗಷ್ಟೇ ಕಲಿಯುತ್ತಿದ್ದೇನೆ. ಭಟ್ರು ಹೇಗೆ ಹೇಳ್ತಾರೋ ಹಾಗೆ ಮಾಡ್ತೀನಿ ಎಂದಿದ್ದಾರೆ.
'ಸಾರಥಿ'ಯಲ್ಲಿ ನಟಿಸುವುದಕ್ಕೂ ಮೊದಲು ಅಭಿನಯ ತರಬೇತಿ ಶಾಲೆಯಲ್ಲಿ ಎರಡು ತಿಂಗಳ ತರಬೇತಿ ಪಡೆದಿದ್ದ ದೀಪಾ ಮೂಲತಃ ಆರ್ಕಿಟೆಕ್ಟ್ ವಿದ್ಯಾರ್ಥಿನಿ. ನಟನೆಯಲ್ಲಿ ಪೂರ್ತಿ ತೊಡಗಿಸಿಕೊಳ್ಳುವ ಬದಲು ಓದಿಗೂ ನನ್ನ ಗಮನ ಕೊಡುತ್ತೇನೆ ಎಂದು ಇತ್ತೀಚೆಗಷ್ಟೇ ಹೇಳಿದ್ದಾರೆ.