ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಾಹಿತ್ಯ ಸಮ್ಮೇಳನ; ಪರಭಾಷಾ ಚಿತ್ರ ಪ್ರದರ್ಶನ ಸ್ಥಗಿತ? (Bangalore theatres | Kannada films | 77th Kannada Sahitya Sammelana | Karnataka)
ಇದು ಇಷ್ಟು ನಿಜವಾಗಲಿದೆ ಎಂಬುದನ್ನು ಕಾದು ನೋಡಬೇಕು. ಆದರೆ ಹೀಗೆ ಮಾಡಿ ಎಂದು ಸರಕಾರ ಮನವಿ ಮಾಡಿರುವುದಂತೂ ಹೌದು. ಫೆಬ್ರವರಿ 4ರಿಂದ 6ರವರೆಗೆ ಬೆಂಗಳೂರಿನಲ್ಲಿ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವುದರಿಂದ ಆ ದಿನಗಳಲ್ಲಿ ಕನ್ನಡೇತರ ಚಿತ್ರಗಳನ್ನು ಪ್ರದರ್ಶಿಸಬೇಡಿ ಎಂದು ವಿನಂತಿಸಲಾಗಿದೆ.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಗೃಹಸಚಿವ ಆರ್. ಅಶೋಕ್ ಈ ರೀತಿ ಮನವಿ ಮಾಡಿರುವುದು. ಸಾಹಿತ್ಯ ಸಮ್ಮೇಳನ ನಡೆಯುವ ದಿನಗಳಾದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಬೆಂಗಳೂರಿನ ಮಲ್ಟಿಪ್ಲೆಕ್ಸುಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳು ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ. ಈ ಸಂಬಂಧ ಚಿತ್ರಮಂದಿರಗಳಿಗೆ ಪತ್ರ ಬರೆಯುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಚಿತ್ರಮಂದಿರಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿಂಗಲ್ ಪರದೆ ಚಿತ್ರಮಂದಿರಗಳು ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸುವ ತೀರ್ಮಾನಕ್ಕೆ ಬರಬಹುದು. ಆದರೆ ಇದುವರೆಗೆ ಕನ್ನಡ ಚಿತ್ರಗಳನ್ನು ಪ್ರದರ್ಶಿಸದೇ ಇರುವ ಥಿಯೇಟರುಗಳೂ ಬೆಂಗಳೂರಿನಲ್ಲಿವೆ. ಅವುಗಳ ಮನವೊಲಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಅತ್ತ ಸಮ್ಮೇಳನಕ್ಕೆ ಪೂರಕವೆಂಬಂತೆ ಚಿತ್ರೋದ್ಯಮವೂ ಫೆಬ್ರವರಿ 4ರಂದು ಕೆಲಸ ಮಾಡದೇ ಇರಲು ನಿರ್ಧರಿಸಿದೆ. ಸಾಹಿತ್ಯ ಮತ್ತು ಸಿನಿಮಾ ಬೇರೆಯಲ್ಲ. ಹಾಗಾಗಿ ಆ ದಿನ ಸಾಹಿತ್ಯ ಸಮ್ಮೇಳನಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಚಿತ್ರೀಕರಣ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸುವುದು ಬೇಡ ಎಂದಿರುವ ಕನ್ನಡ ಚಿತ್ರರಂಗ, ಕನ್ನಡ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ತಾರೆಯರು ಮತ್ತು ತಂತ್ರಜ್ಞರಿಗೆ ಕರೆ ನೀಡಿದೆ.

ಆಡಿಯೋ ಸಿಡಿ ಆಫರ್...
ಈ ನಡುವೆ ಸಾಹಿತ್ಯ ಸಮ್ಮೇಳನದಲ್ಲಿ ಲಹಿ ಆಡಿಯೋ ಕಂಪನಿ ಕನ್ನಡಿಗರಿಗೆ ವಿನೂತನ ಕೊಡುಗೆಯೊಂದನ್ನು ಪ್ರಕಟಿಸಿದೆ. ಒಂದು ರೂಪಾಯಿಗೆ ಒಂದು ಹಾಡು ಎನ್ನುವುದೇ ಈ ವಿಶಿಷ್ಟ ಆಫರ್.

ಕನ್ನಡ ಡಿಂಡಿಮ ಎಂದು ಹೆಸರಿಸಲಾಗಿರುವ 1,000 ಹಾಡುಗಳಿರುವ 25 ಆಡಿಯೋ ಸಿಡಿಗಳ ಪ್ಯಾಕಿಗೆ 1,000 ರೂಪಾಯಿ. ಇದರಲ್ಲಿ ಭಕ್ತಿಗೀತೆಗಳು, ವಚನಗಳು, ದಾಸರ ಪದಗಳು, ಜಾನಪದ ಗೀತೆಗಳು, ಮಂಕು ತಿಮ್ಮನ ಕಗ್ಗ ಸೇರಿದಂತೆ ಕನ್ನಡ ಸಾಹಿತ್ಯ ಲೋಕಕ್ಕೆ ಸಂಬಂಧಪಟ್ಟ ಹಲವು ಸಿಡಿಗಳಿರುತ್ತವೆ ಎಂದು ಲಹರಿ ವೇಲು ತಿಳಿಸಿದ್ದಾರೆ.
ಇವನ್ನೂ ಓದಿ