ಮೊನ್ನೆ ಮೊನ್ನೆಯವರೆಗೆ ನೀವೇ ಗುರು ಎಂದು ಪ್ರದಕ್ಷಿಣೆ ಹಾಕುತ್ತಿದ್ದ ಹಾಸ್ಯನಟ ಕೋಮಲ್ ಕುಮಾರ್ ತನ್ನ ಗುರುವಿಗೆ ತಿರುಮಂತ್ರ ಹಾಕಿದರಾ? ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ಮತ್ತು ಕೋಮಲ್ ನಡುವಿನ ಭಿನ್ನಾಭಿಪ್ರಾಯದ ಕಾರಣದಿಂದ ಡಬ್ಬಿಂಗ್ ಕಾರ್ಯದಲ್ಲಿ ಭಾರೀ ಆಟಗಳು ನಡೆದಿವೆಯೇ? ಹೀಗೆಲ್ಲ ಸಾಂಕ್ರಾಮಿಕ ರೋಗದಂತೆ ಸುದ್ದಿಗಳು ತಡವಾಗಿ ಹರಡುತ್ತಿದ್ದು, ಗಾಂಧಿನಗರ ಸದ್ದೇ ಬಾರದಂತೆ ಗೊಲ್ಲೆಂದು ನಗುತ್ತಿದೆ.
PR
ಇದು ಕೋಮಲ್ ಕುಮಾರ್ ನಿರ್ಮಾಣದ 'ಕಳ್‌ಮಂಜ' ಚಿತ್ರದ ಕುರಿತಾಗಿನ ವಿವಾದ. ಐಶ್ವರ್ಯಾ ನಾಗ್ ಮತ್ತು ಉದಯತಾರಾ ನಾಯಕಿಯರಾಗಿರುವ, ಸ್ವತಃ ಕೋಮಲ್ ನಾಯಕರಾಗಿರುವ, ರಮೇಶ್ ಪ್ರಭಾಕರನ್ ನಿರ್ದೇಶಿಸಿರುವ ಈ ಚಿತ್ರ ನಿನ್ನೆ (ಫೆ.4, ಶುಕ್ರವಾರ) ತಾನೇ ಬಿಡುಗಡೆಯಾಗಿದೆ.
ಇಬ್ಬರ ನಡುವೆ ಯಾವ ವಿಚಾರದ ಕುರಿತು ಭಿನ್ನಾಭಿಪ್ರಾಯ ಮೂಡಿತ್ತು ಎನ್ನುವುದು ಸ್ಪಷ್ಟವಿಲ್ಲ. ಬಹುಶಃ ಅದು ಸಂಭಾವನೆ ಅಥವಾ ಇಗೋ ಕುರಿತಾಗಿ ಹುಟ್ಟಿರಬಹುದು. ಆದರೆ ಮುನಿಸಿಕೊಂಡಿರುವುದಂತೂ ಸತ್ಯ ಎನ್ನುತ್ತವೆ ಮೂಲಗಳು.
ಇದು ಕೊಂಚ ಅತಿರೇಕ ಅನ್ನುವ ಮಟ್ಟಕ್ಕೆ ಹೋಗಿದ್ದು ಡಬ್ಬಿಂಗ್ ಸಂದರ್ಭದಲ್ಲಿ. ಪ್ರಮುಖ ಪಾತ್ರವೊಂದನ್ನು ಮಾಡಿರುವ ಗುರುಪ್ರಸಾದ್ ತನ್ನ ಪಾಲಿನ ಡಬ್ಬಿಂಗ್ ಮಾಡಬೇಕಿತ್ತು. ಆದರೆ ಇದನ್ನು ನಿರ್ಮಾಪಕ ಕೋಮಲ್ ಬೇರೊಬ್ಬ ಕಂಠದಾನ ಕಲಾವಿದರ ಮೂಲಕ ಮಾಡಿಸಿದ್ದರು.
ಇದು ಭಾರೀ ವಿವಾದಕ್ಕೆ ಕಾರಣವಾಗುತ್ತದೆ ಎನ್ನುವ ಹಂತದಲ್ಲಿ ರಾಜಿ ಸಂಧಾನ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಅದು ಒಂದಷ್ಟು ಕೆಲಸವೂ ಮಾಡಿತ್ತು. ಸ್ವತಃ ಗುರುಪ್ರಸಾದ್ ಡಬ್ಬಿಂಗ್ ಮಾಡಿದರು.
ಆದರೆ ಮತ್ತೆ ಎಡವಟ್ಟು ಮಾಡಿಕೊಂಡದ್ದು ಕೋಮಲ್. ತನ್ನ ಪಾತ್ರಕ್ಕೆ ಗುರುಪ್ರಸಾದ್ ಡಬ್ಬಿಂಗ್ ಮಾಡಿದರೂ, ಅದನ್ನು ಕೆಲವೇ ದೃಶ್ಯಗಳಿಗೆ ಸೀಮಿತಗೊಳಿಸಿದ್ದು. ಇದಕ್ಕೆ ಕೊಟ್ಟ ಕಾರಣ, ಕಂಠದಾನ ಕಲಾವಿದ ಮತ್ತು ಗುರುಪ್ರಸಾದ್ ಧ್ವನಿ ನಡುವೆ ಅಂತಹ ವ್ಯತ್ಯಾಸವೇ ಇಲ್ಲ ಎನ್ನುವುದು!
ಈ ಬಗ್ಗೆ ಕೋಮಲ್ ಹೇಳುವುದು ಹೀಗೆ: ಇದು ನನ್ನ ಮೊದಲ ಹೋಮ್ ಪ್ರೊಡಕ್ಷನ್. ಹಾಗಾಗಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ. ಗುರುಪ್ರಸಾದ್ ಓರ್ವ ಅದ್ಭುತ ವ್ಯಕ್ತಿತ್ವ ಹೊಂದಿರುವವರು, ಈ ಚಿತ್ರದಲ್ಲಿ ನಟನಾಗಿ ಅವರದ್ದು ಅತ್ಯುತ್ತಮ ನಿರ್ವಹಣೆ. ಅವರು ಈಗಲೂ ನಮ್ಮ ಜತೆಗೇ ಇದ್ದಾರೆ. ಯಾವುದೇ ವಿವಾದವಿಲ್ಲ.
ಅತ್ತ ಮಹಾನ್ ಚಾಲಾಕಿ ಗುರುಪ್ರಸಾದ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 'ನೋ ಕಮೆಂಟ್ಸ್' ಎಂಬ ಎರಡು ಶಬ್ಧಗಳನ್ನು ಉದುರಿಸಿ ಗಡ್ಡ ನೀವಿದ್ದಾರೆ.
ಏನೇ ಆಗಲಿ, ಏಳು ವರ್ಷಗಳ ಹಿಂದಿನ ಮಲಯಾಳಂ ಚಿತ್ರ 'ಚದಿಕ್ಯಾತ ಚಂದು' (ಚಂದು ಮೋಸ ಮಾಡಲ್ಲ) ರಿಮೇಕ್ 'ಕಳ್‌ಮಂಜ'ದಲ್ಲಿ ಕೋಮಲ್ ಕಮಾಲು ಜೋರಾಗಿಯೇ ಇದೆ ಎಂಬ ವಿಮರ್ಶೆಗಳು ಬಂದಿವೆ. ಅದು ಅವರ ಜೇಬು ತುಂಬಿಸಲಿವೆಯೇ ಎಂಬುದನ್ನು ಕಾದು ನೋಡಬೇಕು.