ಹುಡುಗಾಟ, ಒಂದಷ್ಟು ಪೋಲಿ ಬುದ್ಧಿ ಹೊಂದಿರುವ ಹುಡುಗರು ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ? ಅದೇ ಸರದಿಯಲ್ಲಿ ಸೈಲೆಂಟ್ ಹುಡುಗಿ ರಾಧಿಕಾ ಪಂಡಿತ್ ಕೂಡ ಸಾಗಿದ್ದಾರೆ. ಅವರಿಗೂ ಹುಡುಗಾಟಿಕೆಯ ಹುಡುಗರು ಇಷ್ಟವಂತೆ. ಜತೆಗೆ ಕಟ್ಟುಮಸ್ತಾದ ಮೈಕಟ್ಟನ್ನು ಹೊಂದಿರುವವರು ಕೂಡ!
ಇತ್ತೀಚೆಗಷ್ಟೇ ಸಿಕ್ಕಿದ್ದ 'ಮೊಗ್ಗಿನ ಮನಸು' ಹುಡುಗಿ ತನ್ನ ಮನದಾಳದ ಮಾತನ್ನು ಬಿಚ್ಚಿಟ್ಟರು. ತನ್ನ ಐಡಿಯಲ್ ಪುರುಷ, ಹನಿಮೂನ್ ಸ್ಪಾಟ್, ಬಾಲಿವುಡ್, ಪ್ರಪೋಸಲ್ ಹೀಗೆ ಹಲವಾರು ವಿಚಾರಗಳ ಕುರಿತು ಮೈಚಳಿ ಬಿಟ್ಟು ರಾಧಿಕಾ ಮಾತನಾಡಿದ್ದಾರೆ.
ಹುಡುಕಾಟಿಕೆಯ ಮುಖಭಾವವನ್ನು ಹೊಂದಿರುವ ಪುರುಷರು ನನಗಿಷ್ಟ. ಸಖತ್ ಮೈಕಟ್ಟು ಹೊಂದಿರುವವರು ಕೂಡ. ಆದರೂ ಹುಡುಗರು ಮುದ್ದಾಗಿರಬೇಕು. ಪಕ್ಕದ ಮನೆಯ ಹುಡುಗರಂತಿರಬೇಕು. ಅಂತವರು ತುಂಬಾ ಇಷ್ಟ. ಚಾಕೊಲೇಟ್ ಬಾಯ್ ರೀತಿಯ ಹುಡುಗರತ್ತ ನಾನು ಯಾವತ್ತೂ ಆಕರ್ಷಿತಳಾಗುತ್ತೇನೆ ಎಂದು ತಿಳಿಸಿದರು.
ತನ್ನ ಪ್ರೇಮ ನಿವೇದನೆ ಹೇಗಿರಬೇಕು ಎಂಬುದನ್ನೂ ರಾಧಿಕಾ ಪಂಡಿತ್ ವಿವರಿಸಿದ್ದಾರೆ. ಆತ ಎಂಥವನೇ ಆಗಿರಲಿ, ತನ್ನ ಮುಂದೆ ಬಗೆ ಬಗೆಯ ರೀತಿಯಲ್ಲಿ ಪ್ರೇಮವನ್ನು ನಿವೇದಿಸಬೇಕು. ಅದು ನನಗೆ ತುಂಬಾ ಇಷ್ಟ. ನನ್ನ ಮುಂದೆ ಮಂಡಿಯೂರಿ ಆತ ನನಗೆ ಪ್ರಪೋಸ್ ಮಾಡಬೇಕುಎಂದರು.
ಸುಂದರಾಂಗನ ವಿಚಾರ ಬಂದಾಗ ರಣಬೀರ್ ಕಪೂರ್ ಅಂತ ಥಟ್ಟನೆ ಉತ್ತರಿಸಿದರು. ನಿಜಕ್ಕೂ ಆತ ತುಂಬಾ ಕ್ಯೂಟ್. ಹೃತಿಕ್ ರೋಷನ್ ಕೂಡ. ಆತ ಅದ್ಭುತ ದೇಹ ಹೊಂದಿದ್ದಾನೆ. ಡ್ಯಾನ್ಸ್ ಕೂಡ ಅತ್ಯುತ್ತಮವಾಗಿರುತ್ತದೆ ಎನ್ನುವ ರಾಧಿಕಾ, ಬಾಲಿವುಡ್‌ನತ್ತ ಯಾವುದೇ ಆಸೆ ಕಂಗಳು ನನ್ನಲ್ಲಿಲ್ಲ ಎಂದು ಅಚ್ಚರಿಯೆಂಬಂತೆ ಹೇಳಿ ಬಿಟ್ಟಿದ್ದಾರೆ.
ಬಾಲಿವುಡ್‌ನತ್ತ ನಾನು ಗಮನ ಹರಿಸುವುದಿಲ್ಲ. ಈಗ ನನಗಿರುವ ಕೆಲಸದಲ್ಲೇ ನನಗೆ ತೃಪ್ತಿಯಿದೆ, ಸಂತಸವಿದೆ. ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಅದೇ ರೀತಿ ಮಧುಚಂದ್ರದ ನೆಚ್ಚಿನ ತಾಣವನ್ನು ಕೂಡ ಬಹಿರಂಗಪಡಿಸಿದರು. ಈ ಭೂಮಿಯ ಯಾವುದೇ ದ್ವೀಪವಾದರೂ ಆಗಬಹುದಂತೆ. ನನಗೆ ನೀರೆಂದರೆ ಇಷ್ಟ. ನನ್ನ ಹನಿಮೂನ್ ದಿನ ಸುಂದರ ಬೀಚೊಂದಕ್ಕೆ ಹೋಗಲು ಬಯಸುತ್ತೇನೆ ಎಂದು ತನ್ನ ಇಷ್ಟಾನಿಷ್ಟಗಳನ್ನು ಬಹಿರಂಗಪಡಿಸಿದರು.
ರಾಧಿಕಾ ಪಂಡಿತ್‌ರನ್ನು ತೆರೆಯ ಮೇಲೆ ಮೆಚ್ಚಿರುವ ಅಭಿಮಾನಿಗಳು ಈ ಪಟ್ಟಿಯನ್ನು ನೋಡಿ, ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಬಹುಶಃ ಯಾರೂ ಅಡ್ಡಿಪಡಿಸಲಾರರು!