ತನ್ನನ್ನು ಭಾರೀ ಪ್ರೀತಿ, ಆದರದಿಂದ ಸನ್ಮಾನಿಸುತ್ತಿರುವುದನ್ನು ಕಂಡು ತನ್ನ ತಂದೆ, ವರನಟ ಡಾ. ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೇದಿಕೆಯಲ್ಲೇ ನೂರಾರು ಮಂದಿಯ ಸಮ್ಮುಖದಲ್ಲಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ದುನಿಯಾ ಸೂರಿ ನಿರ್ದೇಶನದ 'ಜಾಕಿ' ಶತದಿನೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಶಿವಣ್ಣ ತೀರಾ ಭಾವುಕರಾದರು. ತಾಯಿ ಪಾರ್ವತಮ್ಮ ರಾಜ್‌ಕುಮಾರ್, ಅಜ್ಜಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡು ವೇದಿಕೆಯಲ್ಲೇ ಗದ್ಗದಿತರಾದರು. ಸುಮಾರು ಹೊತ್ತು ಅವರು ಅದೇ ಗುಂಗಿನಲ್ಲಿದ್ದರು. ನಂತರ ನಿರ್ದೇಶಕ ಭಾರ್ಗವ ಮತ್ತಿತರರು ಸಮಾಧಾನಪಡಿಸಿದರು.
ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ರಾಮ್‌ಕುಮಾರ್ ಸೇರಿದಂತೆ ರಾಜ್ ಕುಟುಂಬದ ಅನೇಕ ಸದಸ್ಯರು, 'ಜಾಕಿ' ಚಿತ್ರತಂಡದ ಸೂರಿ, ಯೋಗರಾಜ್ ಭಟ್, ನಾಯಕಿ ಭಾವನಾ ಮೆನನ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಉಳಿದಂತೆ ಶ್ರೀನಾಥ್, ಜಯಂತಿ, ಬಸಂತ್ ಕುಮಾರ್ ಪಾಟೀಲ್, ರಾಕ್‌ಲೈನ್ ವೆಂಕಟೇಶ್, ಬರಗೂರು ರಾಮಚಂದ್ರ, ಸಾರಾ ಗೋವಿಂದು, ಅಶೋಕ್, ರಮೇಶ್, ಉಪೇಂದ್ರ, ಜಗ್ಗೇಶ್, ಶ್ರೀನಗರ ಕಿಟ್ಟಿ, ಲೂಸ್‌ಮಾದ ಯೋಗೀಶ್, ಅಜಯ್ ರಾವ್, ತರುಣ್ ಚಂದ್ರ, ಶ್ರೀಮುರಳಿ, ಸಂಜನಾ ಗರ್ಲಾನಿ, ಐಂದ್ರಿತಾ ರೇ, ಹರ್ಷಿಕಾ ಪೂಣಚ್ಚ, 'ಒಲವೇ ಮಂದಾರ'ದ ಶ್ರೀಕಾಂತ್, ಇಮ್ರಾನ್ ಸರ್ದಾರಿಯಾ, ಲವ್ಲಿ ಸ್ಟಾರ್ ಪ್ರೇಮ್, ದುನಿಯಾ ವಿಜಯ್, ಕೋಮಲ್, ಗುರುಕಿರಣ್ ಕೂಡ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.