ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಗೆಳೆಯರ ಚಿತ್ರದಲ್ಲಿ ಉಚಿತವಾಗಿ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಬಹುತೇಕ ಮಂದಿ ಓದಿರುತ್ತೀರಿ. ಆ ಚಿತ್ರವನ್ನು ಚಿತ್ರಸಾಹಿತಿ ಕವಿರಾಜ್ ನಿರ್ದೇಶಿಸುತ್ತಾರೆ ಮತ್ತು ಆ ಚಿತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ತ್ರಿಶಾ ಕೃಷ್ಣಾರನ್ನು ಕರೆ ತರುವ ಯತ್ನಗಳು ನಡೆಯುತ್ತಿವೆ ಎಂಬ ವರದಿಗಳು ಇದೀಗ ಬಂದಿವೆ.
WD
ದರ್ಶನ್ ಸಹೋದರ ದಿನಕರ ತೂಗುದೀಪ, ಕವಿರಾಜ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಛಾಯಾಗ್ರಾಹಕ ಕೃಷ್ಣಕುಮಾರ್ ಮತ್ತು ನಿರ್ದೇಶಕ ಎಂ.ಡಿ. ಶ್ರೀಧರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀಧರ್ ಇದನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಎಲ್ಲವೂ ಉಲ್ಟಾ-ಪಲ್ಟಾ ಆಗಿದೆ. ಸ್ವತಃ ಕವಿರಾಜ್ ನಿರ್ದೇಶಕರಾಗಲು ಹೊರಟಿದ್ದಾರೆ.
ಇದುವರೆಗೆ ಹತ್ತಾರು ಚಿತ್ರಗಳ ಹಾಡುಗಳಿಗೆ ಸಾಹಿತ್ಯ ಬರೆದಿರುವ ಕವಿರಾಜ್ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಕಳೆದ ಹಲವು ವರ್ಷಗಳಿಂದ ಉಳಿಸಿಕೊಂಡು ಬಂದವರು. ಸುಮಧುರ ಹಾಡಿರಲಿ ಅಥವಾ ಟಪಾಂಗುಚ್ಚಿಯಿರಲಿ -- ಯಾವುದರಲ್ಲೂ ಕಡಿಮೆಯಿಲ್ಲ ಎಂಬಂತೆ ಅವರು ಮೆರೆದವರು. ಈಗ ನಿರ್ದೇಶಕನ ಟೋಪಿಗೆ ತಲೆ ತೂರಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಅವರು ನಿರ್ದೇಶಿಸಲಿರುವ ಈ ಚಿತ್ರಕ್ಕೆ 'ಬುಲ್ ಬುಲ್' ಎಂದು ಹೆಸರಿಡಲಾಗಿದೆ. 'ಗಜ' ಚಿತ್ರದ ಜನಪ್ರಿಯ ಹಾಡು 'ಬಂಗಾರಿ ಯಾರೇ ನೀ ಬುಲ್ ಬುಲ್' ಸಾಲಿನಿಂದ ಎತ್ತಿಕೊಂಡಿರುವ ಪದಗಳಿವು.
ತೆಲುಗಿನಲ್ಲಿ ಪ್ರಭಾಸ್-ಕಾಜಲ್ ಅಗರ್ವಾಲ್ ನಟಿಸಿದ್ದ 'ಡಾರ್ಲಿಂಗ್' ರಿಮೇಕ್ ಚಿತ್ರವಾಗಿರುವ 'ಬುಲ್ ಬುಲ್'ಗೆ ತ್ರಿಶಾರನ್ನು ಒಪ್ಪಿಸಲು ಹಲವು ಕಡೆಗಳಿಂದ ಯತ್ನಗಳು ನಡೆಯುತ್ತಿರುವ ನಡುವೆಯೇ, ಆಕೆ ಮದುವೆಯಾಗಲು ಹೊರಟಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ. ಆದರೆ ಸ್ವತಃ ತ್ರಿಶಾ ಇದನ್ನು ತಳ್ಳಿ ಹಾಕುತ್ತಿದ್ದಾರೆ. ಕೆಲ ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಬಹುದು.