ಆಕ್ಷನ್ ಚಿತ್ರಗಳಲ್ಲಿ ನಟಿಸಿ ಜನ ಮನಗೆದ್ದಿರುವ ಚಿರಂಜೀವಿ ಸರ್ಜಾ ಮುಂದಿನ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಜೋಡಿಯಾಗಿ ಈಗಾಗಲೇ ಕನ್ನಡಿಗರ ಮನೆ ಮಾತಾಗಿರುವ ಮೊಗ್ಗಿನ ಮನಸಿನ ಹುಡುಗಿ ರಾಧಿಕಾ ಪಂಡಿತ್ ಕಾಣಿಸಿಕೊಳ್ಳಲಿದ್ದಾರೆ.
ರಿಮೇಕ್ ಚಿತ್ರಗಳಿಂದಲೇ ಹೆಸರು ಮಾಡಿದ ಎಂ.ಡಿ. ಶ್ರೀಧರ್ ಇದರ ನಿರ್ದೇಶಕರು. ಇನ್ನೂ ಹೆಸರಿಡದ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಲಿದ್ದರೆ, ಕೃಷ್ಣ ಕುಮಾರ್ ಛಾಯಾಗ್ರಹಣವಿರುತ್ತದೆ.
ಇದುವರೆಗೆ ಇದ್ದ ಚಿರು ಆಕ್ಷನ್, ಈ ಚಿತ್ರದಲ್ಲೂ ಮುಂದುವರೆಯಲಿದೆ. ಆದರೆ ಆ ಪಾತ್ರಕ್ಕೆ ಇನ್ನಷ್ಟು ಪುಷ್ಠಿ ನೀಡಲು ಕಾಮಿಡಿ, ರೊಮ್ಯಾನ್ಸ್‌ಗಳನ್ನು ಕೂಡ ಸೇರಿಸಲಾಗಿದೆ. ನಾಯಕಿ ರಾಧಿಕಾ ಪಂಡಿತ್ ವಿದೇಶದಿಂದ ಮರಳಿದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅದ್ಧೂರಿ ಚಿತ್ರಗಳಿಗೆ ಹೆಸರಾಗಿರುವ ರಾಮು ಎಂಟರ್‌ಪ್ರೈಸಸ್ ಬ್ಯಾನರಿನಡಿ ಮೂಡಿ ಬರಲಿರುವ ಈ ಚಿತ್ರ ಫೆಬ್ರವರಿ 23ಕ್ಕೆ ಮುಹೂರ್ತ ಕಾಣಲಿದೆ.
ಕೊನೆಯ ಹಂತದ ಚಿತ್ರೀಕರಣದಲ್ಲಿರುವ ರಾಮು ನಿರ್ಮಾಣದ 'ವೀರ' ಕೊನೆಗೊಂಡ ನಂತರ ಮಾರ್ಚ್ ಮೊದಲ ವಾರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಇದರಲ್ಲಿ ಇನ್ನೊಬ್ಬ ನಾಯಕಿಯನ್ನಾಗಿ 'ಕಳ್ ಮಂಜ' ಖ್ಯಾತಿಯ ಐಶ್ವರ್ಯ ನಾಗ್ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.