ಕನ್ನಡ ಚಿತ್ರರಂಗವನ್ನು ಕಳೆದ ಐದು ದಶಕಗಳಿಂದ ಬಹುತೇಕ ನಿಯಂತ್ರಿಸುತ್ತಿರುವ ವರನಟ ಡಾ. ರಾಜ್‌ಕುಮಾರ್ ಕುಟುಂಬದ ಮೂರನೇ ಪೀಳಿಗೆ ಚಿತ್ರರಂಗದಲ್ಲಿ ಶೀಘ್ರದಲ್ಲೇ ತನ್ನ ಛಾಪನ್ನು ಮೂಡಿಸಲಿದೆ. ಈ ಬಾರಿ ಅದಕ್ಕೆ ಸಿದ್ಧರಾಗಿರುವುದು ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್.
'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಚಿತ್ರರಸಿಕರ ಮನ ಗೆದ್ದಿದ್ದ ರಾಜ್‌ಕುಮಾರ್ ದ್ವಿತೀಯ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಈ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಮುಂದುವರಿಸಿದ್ದಾರೆ. 2012ರ ವರ್ಷದಲ್ಲಿ ಪುತ್ರನನ್ನು ನಾಯಕನ ಪಟ್ಟಕ್ಕೆ ಏರಿಸುವ ಸಿದ್ಧತೆಯಲ್ಲಿರುವುದು ಹೌದು ಎಂದು ಇತ್ತೀಚೆಗಷ್ಟೇ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.
2012ಕ್ಕೆ ಮಗ ವಿನಯ್ ರಾಜ್‌ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತೇನೆ. ಅದೇ ವರ್ಷ ಪ್ರಳಯ ನಡೆಯುತ್ತದೆ ಎಂದು ಜನ ಹೇಳುತ್ತಿದ್ದಾರೆ. ಆಗಲೇ ಮಗನ ಕೆರಿಯರ್‌ಗೆ ಚಾಲನೆ ನೀಡುತ್ತೇನೆ. ಏನಾಗುತ್ತೋ ನೋಡೋಣ ಎಂದು ರಾಘಣ್ಣ ತಿಳಿಸಿದ್ದಾರೆ.
ವಿನಯ್ ರಾಜ್ ನಟನೆಯ ತರಬೇತಿಗಳನ್ನು ಮುಗಿಸಿದ್ದಾರೆ. ಫೈಟಿಂಗ್, ಡ್ಯಾನ್ಸಿಂಗ್ ಎಲ್ಲಾ ಪಕ್ಕಾ ಸಲೀಸು. ಜಿಮ್ ಅಂತೂ ದಿನಚರಿ. ಉಳಿದಿರುವುದು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಮಾತ್ರ. ಅದು ಅದ್ಧೂರಿಯಾಗಿ ಮತ್ತು ಅಭಿಮಾನಿಗಳನ್ನು ತಣಿಸುವ ರೀತಿಯಲ್ಲಿ ಇರಬೇಕು ಎನ್ನುವುದು ರಾಜ್ ಕುಟುಂಬದ ಅಭಿಲಾಷೆ.
90ರ ದಶಕದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಸ್ಟಾರ್‌ಗಿರಿ ಹೊಂದಿದ್ದ ರಾಘಣ್ಣ ಏಳು-ಬೀಳುಗಳನ್ನು ಸಮಾನವಾಗಿ ಸ್ವೀಕರಿಸಿದವರು ಆಗಿರುವುದರಿಂದ ಮಗನ ಚಿತ್ರರಂಗ ಪದಾರ್ಪಣೆಯನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಮಾಡಬಹುದು. ಈ ನಿಟ್ಟಿನಲ್ಲಿ ತರಾತುರಿಯ ನಿರ್ಧಾರವನ್ನು ಅವರು ತೆಗೆದುಕೊಳ್ಳಲಾರರು ಎಂದು ಗಾಂಧಿನಗರದ ಮಂದಿ ಹೇಳುತ್ತಾರೆ.
MOKSHA
ಬಿಡಿ, ಇತ್ತೀಚಿನ ವರ್ಷಗಳಲ್ಲಿ ಮಂಕಾಗಿರುವ ರಾಘವೇಂದ್ರ ರಾಜ್‌ಕುಮಾರ್ ಮತ್ತೆ ನಾಯಕನಾಗಿ ನಟಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುತ್ತಿಲ್ಲ. ಅವರು ಇತ್ತೀಚೆಗೆ ನಟಿಸಿದ ಕೊನೆಯ ಚಿತ್ರ 'ಪಕ್ಕದ್ಮನೆ ಹುಡುಗಿ'.
ಆದರೆ ಯಾವ ಹಂತದಲ್ಲೂ ಯಶಸ್ಸು ಮತ್ತೆ ಒಲಿಯದೇ ಇದ್ದಾಗ ಅದೇ ಹಾದಿಯಲ್ಲಿ ಸಾಗುವ ಪ್ರಯತ್ನವನ್ನು ಕೈ ಬಿಟ್ಟಿರುವ ರಾಘಣ್ಣ, ಮಗನ ಹಾದಿಯನ್ನು ಸುಗಮಗೊಳಿಸುವ ಯೋಚನೆಯಲ್ಲಿ ಮುಳುಗಿದ್ದಾರೆ.
ಈ ನಡುವೆ ಮೂವರು ಸಹೋದರರು ಒಂದೇ ಚಿತ್ರದಲ್ಲಿ ನಟಿಸುವ ಆಸೆಯೊಂದು ಹಾಗೆಯೇ ಉಳಿದುಕೊಂಡಿದೆಯಂತೆ.
ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಚಿತ್ರರಂಗದಲ್ಲಿ ಪ್ರಸಕ್ತ ಅತ್ಯುತ್ತಮ ಮಾರುಕಟ್ಟೆ ಹೊಂದಿರುವವರು. ನಾವು ಮೂವರು ಜತೆಗೆ ನಟಿಸುತ್ತೇವೆ ಎಂದಾಗ ಅಭಿಮಾನಿಗಳು ಸಹಜವಾಗಿಯೇ ಏನಾದರೂ ಹೊಸತು, ಭಿನ್ನವಾದುದನ್ನು ನಿರೀಕ್ಷಿಸುತ್ತಾರೆ. ಹಾಗಾಗಿ ನಾವು ಅತ್ಯುತ್ತಮ ಕಥೆಯ ಹುಡುಕಾಟದಲ್ಲಿದ್ದೇವೆ. ಅದು ಸಿಕ್ಕರೆ ಖಂಡಿತಾ ಜತೆಯಾಗುತ್ತೇವೆ ಎಂದು ರಾಘಣ್ಣ ಹೇಳಿಕೊಂಡಿದ್ದಾರೆ.
ನಮ್ಮದೇ ಪ್ರೊಡಕ್ಷನ್ ಇದೆ. ಹಾಗಾಗಿ ಚಿತ್ರ ನಿರ್ಮಿಸೋದು ದೊಡ್ಡ ವಿಷಯ ಅಲ್ಲ. ಆದರೆ ಜನಗಳ, ಅಭಿಮಾನಿಗಳ ದೃಷ್ಟಿಯಿಂದ ನೋಡಿ ನಾವು ಚಿತ್ರಕ್ಕೆ ಕೈ ಹಾಕಬೇಕಾಗುತ್ತದೆ. ಅಪ್ಪು ಇರ್ತಾನೆ, ಶಿವಣ್ಣ ಇರ್ತಾರೆ, ಮೂರೂ ಜನ ಇದ್ದೇವೆ ಎಂದ ಮೇಲೆ ಮೂವರು ಹೀರೋಯಿನ್ಸ್, ಡ್ಯಾನ್ಸು ಇದ್ದೇ ಇರುತ್ತದೆ ಎಂಬಂತಹ ಪರಿಸ್ಥಿತಿ ಬೇಕು.
ಹಾಗೆಂದು ಅತ್ಯುತ್ತಮ ಕಥೆಯಿಲ್ಲದ ಚಿತ್ರ ಮಾಡಲಾಗದು. ಮೂವರನ್ನೂ ಒಟ್ಟಿಗೆ ಸೇರಿಸುವ ಕಥೆ ಬೇಕಾಗುತ್ತದೆ. ಅಪ್ಪು ಚೆನ್ನಾಗಿ ಫೈಟ್ ಮಾಡುತ್ತಾನೆ. ಶಿವಣ್ಣ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ. ರಾಘಣ್ಣನ ಕಾಮಿಡಿ ಚೆನ್ನಾಗಿರುತ್ತದೆ ಎಂಬ ನಿರೀಕ್ಷೆಗಳು ಜನರಲ್ಲಿ ಇರುತ್ತವೆ. ಇದನ್ನೆಲ್ಲ ಈಡೇರಿಸುವ ಕಥೆಯ ಅಗತ್ಯ ನಮಗಿದೆ. ಜನ ಭಲೇ ಎನ್ನುವಂತ ಚಿತ್ರ ಮಾಡುವ ಇಚ್ಛೆ ನಮ್ಮದು ಎನ್ನುವುದು ರಾಜ್ ದ್ವಿತೀಯ ಪುತ್ರನ ಆಸೆ.