ಕನ್ನಡದಲ್ಲೀಗ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚಾಗೆ ಡಿಮಾಂಡೋ ಡಿಮಾಂಡ್! ದೊಡ್ಡ ದೊಡ್ಡ ನಟರ ಜತೆ ಅಭಿನಯಿಸುವ ಅವಕಾಶ ಅವರದ್ದಾಗುತ್ತಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ಸ್ಮೈಲಿಂಗ್ ಸ್ಟಾರ್ ಅಜಯ್ ರಾವ್.
ಅಜಯ್ ನಾಯಕನಾಗಿರುವ 'ಅದ್ವೈತ' ಚಿತ್ರಕ್ಕೆ ಹರ್ಷಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಲವು ಸಮಯದಿಂದ ಈ ಪಾತ್ರಕ್ಕಾಗಿ ನಿರ್ದೇಶಕ ಗಿರಿರಾಜ್ ಹುಡುಕಾಟ ನಡೆಸುತ್ತಿದ್ದರು.
ಶಿವರಾಜ್ ಕುಮಾರ್ ನಾಯಕನಾಗಿದ್ದ 'ತಮಸ್ಸು' ಚಿತ್ರದಲ್ಲಿ ಮುಸ್ಲಿಂ ಮುಗ್ಧ ಹುಡುಗಿಯ ಪಾತ್ರ ಮಾಡಿದ್ದ ಹರ್ಷಿಕಾ ಹಲವರ ಗಮನ ಸೆಳೆದು, ಒಂದರ ಹಿಂದೆ ಒಂದು ಅವಕಾಶ ಗಿಟ್ಟಿಸಿಕೊಳ್ಳುತ್ತಲೇ ಬಂದವರು. ಪ್ರಸಕ್ತ ಬಹು ಬೇಡಿಕೆಯ ನಟಿ ಎಂಬ ಗರಿ ಅವರಿಗೆ ಅಂಟಿಕೊಂಡಿದೆ.
'ದೊಡ್ಡ ಬ್ಯಾನರಿನ ಮತ್ತು ಸ್ಟಾರ್ ನಟರ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಅಜಯ್ ರಾವ್‌ರಂಥ ಯಶಸ್ವೀ ನಟರೊಂದಿಗೆ ನಟಿಸುವುದಕ್ಕೆ ಖುಷಿಯಾಗುತ್ತಿದೆ' ಎಂದು ಸಂತಸ ವ್ಯಕ್ತಪಡಿಸಿರುವ ಹರ್ಷಿಕಾ, ಇನ್ನಷ್ಟೇ ಆರಂಭವಾಗಬೇಕಿರುವ 'ಪರಿ' ಚಿತ್ರದಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಎನ್.ಎಂ. ಸುರೇಶ್ ನಿರ್ಮಾಣದ 'ಅದ್ವೈತ' ಚಿತ್ರದಲ್ಲಿ ಅಜಯ್ ರಾವ್ ಉಚಿತವಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಪ್ರಸಕ್ತ ಸೋತು ಸುಣ್ಣವಾಗಿರುವ ಇದೇ ಸುರೇಶ್, ಒಂದು ಕಾಲದಲ್ಲಿ ಅಜಯ್‌ರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು. ಅದನ್ನು ಮರೆಯದ ಅಜಯ್, ಇತ್ತೀಚೆಗಷ್ಟೇ ನಿರ್ಮಾಪಕರನ್ನು ಭೇಟಿ ಮಾಡಿ ನಯಾ ಪೈಸೆ ತೆಗೆದುಕೊಳ್ಳದೆ ನಟಿಸುವ ಆಫರ್ ಮುಂದಿಟ್ಟಿದ್ದರು.
ಈ ಚಿತ್ರಕ್ಕೆ ಈಗಾಗಲೇ ಚಿಕ್ಕಮಗಳೂರಿನಲ್ಲಿ 24 ದಿನಗಳ ಅಹೋ ರಾತ್ರಿ ಚಿತ್ರೀಕರಣ ನಡೆಸಲಾಗಿದೆ.