ಚಿತ್ರಗೀತೆಗಳನ್ನು ಸಿನಿಮಾ ಶೀರ್ಷಿಕೆಯಾಗಿ ಬಳಸುವ ಸಂಪ್ರದಾಯ ಇಂದು ನಿನ್ನೆಯದಲ್ಲ. 'ಗಂಗೆ ಬಾರೆ ತುಂಗೆ ಬಾರೆ', 'ನನ್ನಾಸೆಯಾ ಹೂವೆ', 'ನಿನದೇ ನೆನಪು', 'ಭಾಗ್ಯದ ಲಕ್ಷ್ಮಿ ಬಾರಮ್ಮ', 'ಏನೋ ಒಂಥರಾ', 'ಮೆಲ್ಲುಸಿರೇ ಸವಿಗಾನ', 'ಹಾಗೆ ಸುಮ್ಮನೆ', 'ಕುಣಿದು ಕುಣಿದು ಬಾರೆ', 'ಮಳೆಯಲಿ ಜೊತೆಯಲಿ', 'ಹೂಂ ಅಂತೀಯ ಉಹೂಂ ಅಂತೀಯ', ಹೀಗೆ ಇಂಥ ಶೀರ್ಷಿಕೆಗಳ ಯಾದಿ ಬೆಳೆಯುತ್ತಲೇ ಇದೆ.
ಇದಕ್ಕೀಗ ಹೊಸ ಸೇರ್ಪಡೆ 'ಕೇಳದೆ ನಿಮಗೀಗ'. ಇದು ಯಾವ ಚಿತ್ರದ ಗೀತೆ ಎಂದು ಗೊತ್ತೇ? ಶಂಕರ್ ನಾಗ್ ಅಭಿನಯದ 'ಗೀತಾ' ಚಿತ್ರದಲ್ಲಿನ 'ಕೇಳದೆ ನಿಮಗೀಗ, ದೂರದಲ್ಲಿ ಯಾರೋ ಹಾಡು ಹೇಳಿದಂತೆ' ಎಂಬ ಹೆಣ್ಣಿನ ನೊಂದ ವಿರಹ ಗೀತೆಯ ಸಾಲಿದು.
ಈಗಲೂ ಗುನುಗುನಿಸುವ ಆ ಹಾಡಿನ ಮೊದಲ ಎರಡು ಪದ 'ಕೇಳದೆ ನಿಮಗೀಗ' ನಿರ್ದೇಶಕ ಸತೀಶ್ ಪ್ರಧಾನ್ ಅವರ ಹೊಸ ಚಿತ್ರದ ಶೀರ್ಷಿಕೆಯಾಗಿಬಿಟ್ಟಿದೆ. 'ದೂರದಿಂದ ಯಾರೋ..' ಎನ್ನುವುದು ಉಪ ಶೀರ್ಷಿಕೆ.
ವಿ. ಮನೋಹರ್ ಜನಪದ ಸಂಗೀತ ನೀಡಲಿದ್ದರೆ, ಶ್ರೀವೆಂಕಟ್ ಛಾಯಾಗ್ರಹಕರು. ಪೂಜಾ ಗಾಂಧಿ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರದ್ದು ಮನಶಾಸ್ತ್ರ ವಿದ್ಯಾರ್ಥಿನಿಯ ಪಾತ್ರ.