ತಮ್ಮ ಅಭಿನಯ ವೃತ್ತಿಯ 25ನೇ ವರ್ಷದಲ್ಲಿ ಶಿವರಾಜ್ ಕುಮಾರ್‌ಗೆ 'ಮೈಲಾರಿ' ಚಿತ್ರದ ಯಶಸ್ಸು ಉತ್ತೇಜನ ನೀಡಿದೆ. 2010ರ ಅಂತ್ಯದಲ್ಲಿ ಆರಂಭವಾದ ಶುಭ ಘಳಿಗೆ 2011ರಲ್ಲೂ ಮುಂದುವರಿಯುತ್ತಿದೆ ಎಂದು ಹೇಳಿಕೊಂಡಿರುವ ಶಿವಣ್ಣ 'ಮೈಲಾರಿ' ಯಶಸ್ಸಿನ ಸಂಭ್ರಮ ಹಂಚಿಕೊಳ್ಳಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಈಗ ಅವರು ಎಲ್ಲಿ ಹೋದಲ್ಲಿ ಜನ ಜಾತ್ರೆ.
PR
ಮೊದಲ ಹಂತದಲ್ಲಿ ಬೀದರ್, ಗುಲ್ಬರ್ಗಾ, ಬಳ್ಳಾರಿ, ಹೊಸಪೇಟೆ ಪ್ರವಾಸ ಮುಗಿಸಿದ ಶಿವಣ್ಣ, ಎರಡನೆ ಹಂತದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮುಂತಾದ ಕಡೆ ಭೇಟಿ ನೀಡಿದರು. ರಾಜ್ಯದೆಲ್ಲೆಡೆ ಆರ್. ಚಂದ್ರು ನಿರ್ದೇಶನದ 'ಮೈಲಾರಿ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದನ್ನು ಕಣ್ಣಾರೆ ಕಂಡ ಅವರು ಧನ್ಯರಾದರು.
'ನಾನು ಜನರಿಗೆ ಹತ್ತಿರವಾದೆ. ಅವರ ಪ್ರೀತಿ, ವಾತ್ಸಲ್ಯ ಕಂಡು ಬೆರಗಾಗಿ ಹೋದೆ. ಮೈಲಾರಿ ಜಾತ್ರೆಯ ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡಿದೆ. ನನ್ನ ಪ್ರವಾಸದಿಂದ 'ಮೈಲಾರಿ' ಚಿತ್ರಕ್ಕೆ ಒಳ್ಳೆಯ ಪ್ರಚಾರ ಸಿಕ್ಕಿತು. ಮುಂಬರುವ ನನ್ನ ಚಿತ್ರಗಳನ್ನೂ ಇದೇ ರೀತಿ ಪ್ರೊಮೋಟ್ ಮಾಡಬೇಕೆಂದು ನಿರ್ಧರಿಸಿದ್ದೇನೆ' ಎಂದು ಅವರು ಹೇಳಿದ್ದಾರೆ.
'ಮೈಲಾರಿ' ಜಾತ್ರೆಯಿಂದ ಜನರಿಗೆ ಕನ್ನಡ ಚಿತ್ರಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಯುವಂತಾಗಿದೆ. ಕನ್ನಡ ಸಿನೆಮಾ ನೋಡಬೇಕು ಅಂತ ಮನಸ್ಸು ಮಾಡುತ್ತಿದ್ದಾರೆ. ಇದೆಲ್ಲ ಒಳ್ಳೆಯ ಮುನ್ಸೂಚನೆ ಎಂದೂ ಅವರು ಹೇಳಿಕೊಂಡರು.