ಮಾರ್ಚ್‌ನಲ್ಲಿ ಅಮೆರಿಕಾ-ಆಂಧ್ರದಲ್ಲಿ ಉಪ್ಪಿ 'ಸೂಪರ್' ಕಲರವ
ಶುಕ್ರವಾರ, 18 ಫೆಬ್ರವರಿ 2011( 14:37 IST )
ಅಮೆರಿಕಾದ ಕನ್ನಡಿಗರಿಗೆ ರಿಯಲ್ ಸ್ಟಾರ್ ಉಪೇಂದ್ರ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮುಂದಿನ ತಿಂಗಳು ಅಮೆರಿಕಾದಾದ್ಯಂತ 'ಸೂಪರ್' ಬಿಡುಗಡೆಯಾಗುತ್ತದೆ ಎಂದು ಪ್ರಕಟಿಸಿದ್ದಾರೆ. ಈ ನಡುವೆ ತೆಲುಗು ಆವೃತ್ತಿಯು ಆಂಧ್ರಪ್ರದೇಶದಲ್ಲಿ ಮಾರ್ಚ್ 2ರಂದು ಬಿಡುಗಡೆಯಾಗುತ್ತದೆ ಎಂದೂ ಮೂಲಗಳು ಹೇಳಿವೆ.
ಕನ್ನಡದಲ್ಲಿ ಭಾರೀ ಅಲೆಗಳನ್ನೇ ಸೃಷ್ಟಿಸಿರುವ ಉಪ್ಪಿ ನಿರ್ದೇಶನದ 'ಸೂಪರ್' ಕನ್ನಡ ಆವೃತ್ತಿಯು ಅಮೆರಿಕಾದಲ್ಲಿ ಬಿಡುಗಡೆ ಕಾಣುತ್ತಿರುವುದು ಅವರ ಗೆಳೆಯ ಶಿವಮೂರ್ತಿಯವರ ಸಹಕಾರದೊಂದಿದೆ. ಇದನ್ನು ಉಪ್ಪಿ ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿಕೊಂಡಿದ್ದಾರೆ.
PR
'ನೀವು ತೋರಿಸಿದ ತಾಳ್ಮೆ ಮತ್ತು ಬೆಂಬಲಕ್ಕಾಗಿ ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ಹೇಳುತ್ತಿದ್ದೇನೆ. ನನ್ನ ಗೆಳೆಯ ಶಿವಮೂರ್ತಿಯ ಸಹಾಯದೊಂದಿಗೆ ಅಮೆರಿಕಾದಲ್ಲಿ ಸೂಪರ್ ಮುಂದಿನ ತಿಂಗಳು (ಮಾರ್ಚ್) ಬಿಡುಗಡೆಯಾಗುತ್ತಿದೆ. ರಾಕ್‌ಲೈನ್ ವೆಂಕಟೇಶ್ ಮತ್ತು ಸುಭಾಷ್ ಚಂದ್ರ ಗಾಂಧಿಯನ್ನು ಮುಖಾಮುಖಿಯಾಗಲು ಸಿದ್ಧರಾಗಿ' ಎಂದು ಉಪೇಂದ್ರ ತಿಳಿಸಿದ್ದಾರೆ.
ಆಂಧ್ರದಲ್ಲಿ ತೆಲುಗು ಬಿಡುಗಡೆ... ಆಂಧ್ರಪ್ರದೇಶದಾದ್ಯಂತ ಭಾರೀ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರ ತನ್ನ ಸೂಪರ್ ಚಿತ್ರವನ್ನು ಮಾರ್ಚ್ 2 ಅಥವಾ 3ರಂದು ಅಲ್ಲಿ ಬಿಡುಗಡೆ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದೆ. ನಿರ್ಮಾಪಕ ರಾಕ್‌ಲೈನ್ ನೇರವಾಗಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಇತ್ತೀಚೆಗಷ್ಟೇ ಹೈದರಾಬಾದಿನಲ್ಲಿ ತೆಲುಗು ಸೂಪರ್ ಆಡಿಯೋ ಬಿಡುಗಡೆಯಾಗಿತ್ತು. ಬಳಿಕ ಹತ್ತಾರು ಟಿವಿ ಚಾನೆಲ್‌ಗಳಲ್ಲಿನ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಉಪೇಂದ್ರ, ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದರು. ಹಲವು ಕಡೆ ಪ್ರವಾಸ ಕೂಡ ಮಾಡಿದ್ದರು. ಬೇರೆ ರೀತಿಯ ಪ್ರಚಾರ ಕಾರ್ಯಗಳನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.
ಹೆಸರಿಲ್ಲದ ಚಿತ್ರವನ್ನು ಚೆನ್ನೈಯಲ್ಲಿ ನೋಡಿರುವ ನಾಯಕಿ ನಯನತಾರಾ, ತೆಲುಗು ಆವೃತ್ತಿಯ ಪ್ರಚಾರಕ್ಕೆ ಸಹಕರಿಸುವುದಾಗಿ ಹೇಳಿದ್ದಾರೆ ಎಂದೂ ಮೂಲಗಳು ಹೇಳಿವೆ.