ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭೀತಿಯಿಲ್ಲ, ನಾನು ಸಹಾಯಕ ನಿರ್ದೇಶಕನಾಗಿದ್ದವನು: ಗಣೇಶ್ (Sana Khan | Ganesh | Kool | Shilpa Ganesh)
ಇದು ಹೋಮ್ ಬ್ಯಾನರಿನಲ್ಲೇ ಸಿದ್ಧವಾಗುತ್ತಿರುವ 'ಕೂಲ್' ಚಿತ್ರದ ನಿರ್ದೇಶನದ ಬಗ್ಗೆ ಗೋಲ್ಡನ್ ಸ್ಟಾರ್ ಹೇಳಿಕೊಂಡಿರುವ ಮಾತು. ನಿರ್ದೇಶನವೆಂದರೆ ನನಗೆ ಭೀತಿಯಿಲ್ಲ, ಅದನ್ನು ಹೊರೆ ಎಂದು ಭಾವಿಸಿಲ್ಲ. ನಾನು ನಾಯಕನಾಗುವ ಮೊದಲು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದವನು ಎಂದು ಆತ್ಮವಿಶ್ವಾಸದಿಂದ ತಿಳಿಸಿದ್ದಾರೆ.

'ಕೂಲ್' - ಸಖತ್ ಹಾಟ್ ಮಗಾ ಎಂಬ ಟ್ಯಾಗ್ ಹೊಂದಿರುವ ಚಿತ್ರ ಮುಹೂರ್ತ ಕಂಡ ಕೆಲವೇ ದಿನಗಳಲ್ಲಿ 'ಹಾಟ್' ಆಗಿತ್ತು. ಕಾರಣ ನಿರ್ದೇಶಕ ಮುಸ್ಸಂಜೆ ಮಹೇಶ್ ಮತ್ತು ಕ್ಯಾಮರಾಮ್ಯಾನ್ ರತ್ನವೇಲು ನಡುವಿನ ಗುದ್ದಾಟ. ಪರಿಣಾಮ ಮಹೇಶ್‌ರನ್ನು ಹೊರ ದಬ್ಬಲಾಯಿತು. ಆ ಸ್ಥಾನಕ್ಕೆ ಗಬಕ್ಕೆಂದು ಸ್ವತಃ ಗಣೇಶ್ ಬಂದು ಕೂತರು.
PR

ಈ ಬಗ್ಗೆ ಹಳೆ ನೆನಪುಗಳನ್ನು ಮೆಲುಕು ಹಾಕಿರುವ ಗಣೇಶ್ ಮುಖದಲ್ಲಿ ಗೊಂದಲಗಳಿಲ್ಲ. 'ಒಮ್ಮಿಂದೊಮ್ಮೆಲೇ ದೊಡ್ಡ ಜವಾಬ್ದಾರಿಯೊಂದು ನನ್ನ ಹೆಗಲಿಗೆ ಬಿದ್ದಾಗ, ನಾನು ವಿಚಲಿತನಾಗುವುದು ಅಥವಾ ಭೀತಿಗೊಳಗಾಗಲಿಲ್ಲ. ನಾನು ಚಿತ್ರರಂಗಕ್ಕೆ ಪ್ರವೇಶಿಸಿದ್ದೇ ಒಬ್ಬ ಸಹಾಯಕ ನಿರ್ದೇಶಕನಾಗಿ. ಹಾಗಾಗಿ ಇಲ್ಲಿ ಉಳಿದ ಪ್ರಶ್ನೆಗಳ ವಿಚಾರವೇ ಅಪ್ರಸ್ತುತ' ಎನ್ನುತ್ತಾರೆ.

ಗೋಲ್ಡನ್ ಮೂವೀಸ್ ಬ್ಯಾನರಿನಲ್ಲಿ ಶಿಲ್ಪಾ ಗಣೇಶ್ ನಿರ್ಮಿಸುತ್ತಿರುವ ಚಿತ್ರದಲ್ಲಿ ಸಾನಾ ಖಾನ್ ನಾಯಕಿ. ವಿ. ಹರಿಕೃಷ್ಣ ಸಂಗೀತ, 'ಘಜನಿ' ಖ್ಯಾತಿ ಆಂಟನಿ ಸಂಕಲನ, ರಮೇಶ್ ದೇಸಾಯಿ ಕಲಾ ನಿರ್ದೇಶನವಿದೆ. ಚಿತ್ರದ ಉಳಿದ ತಾರಾಗಣದಲ್ಲಿ ಸಾಧು ಕೋಕಿಲಾ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ಮುಂತಾದವರಿದ್ದಾರೆ.

ಅದರಲ್ಲೂ ಹೋಮ್ ಪ್ರೊಡಕ್ಷನ್ ಸಿನಿಮಾ ಆಗಿರುವ ಕಾರಣ, ತನ್ನದೇ ನಿರ್ದೇಶನದಲ್ಲಿ ಸಾಗುವುದು ಗಣೇಶ್‌ಗೆ ದೊಡ್ಡ ವಿಚಾರ ಎನಿಸಿಲ್ಲ. ತಪ್ಪುಗಳಾದಾಗ ದುರುಗುಟ್ಟುವ ನಿರ್ಮಾಪಕರು ಇಲ್ಲದಿರುವುದೇ ಇದಕ್ಕೆ ಕಾರಣ.

'ನಾನು ಚಿತ್ರೀಕರಣ ಆರಂಭವಾದ ದಿನದಿಂದಲೇ ಪ್ರತಿ ದೃಶ್ಯದ ಬಗ್ಗೆ ತಿಳಿದುಕೊಂಡಿದ್ದೆ. ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿತ್ತು. ಹಾಗಾಗಿ ನಾನು ಜವಾಬ್ದಾರಿ ವಹಿಸಿಕೊಂಡು ಆಕ್ಷನ್ ಎಂದು ಹೇಳಿದಾಗ ನನಗದು ಹೊಸತು ಎಂಬ ಭಾವನೆ ಬರಲಿಲ್ಲ' ಎಂದರು.

ಆದರೂ ನಿರ್ಮಾಣ, ನಿರ್ದೇಶನ ಮತ್ತು ನಟನೆ - ಈ ಮೂರೂ ಜವಾಬ್ದಾರಿಗಳನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ ಎಂಬುದನ್ನು ಅವರು ಒಪ್ಪಿಕೊಂಡರು. ಒಬ್ಬ ನಾಯಕನಾಗಿ ಸೆಟ್‌ಗೆ ಒಂಬತ್ತು ಗಂಟೆಗೆ ಬರಬಹುದು. ಅಷ್ಟು ಸ್ವಾತಂತ್ರ್ಯವಿರುತ್ತದೆ. ಆದರೆ ಒಬ್ಬ ನಿರ್ದೇಶಕನಾಗಿ ನಾನು ಈ ಚಿತ್ರಕ್ಕೆ ಬೆಳಿಗ್ಗೆ ಐದು ಗಂಟೆಗೆಲ್ಲ ಚಿತ್ರೀಕರಣ ಸ್ಥಳದಲ್ಲಿರುತ್ತಿದ್ದೆ. ಚಿತ್ರತಂಡದ ಜತೆ ಚರ್ಚೆ ನಡೆಸುತ್ತಿದ್ದೆ. ಮಧ್ಯರಾತ್ರಿ ವಾಪಸ್ ಬರುತ್ತಿದ್ದೆ. ಅದಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ಭರವಸೆ ನನ್ನಲ್ಲಿದೆ. ಚಿತ್ರ ಉತ್ತಮವಾಗಿ ಮೂಡಿ ಬರಲಿದೆ ಎಂದು ಗಣೇಶ್ ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ನಿರಂತರ ಫ್ಲಾಪ್ ಚಿತ್ರಗಳನ್ನು ನೀಡಿರುವ ಗಣೇಶ್‌ಗೆ ಈ ಚಿತ್ರದ ಮೂಲಕ ಮುಕ್ತಿ ದೊರಕುವ ವಿಶ್ವಾಸವೂ ಇದೆ. ಅಷ್ಟರಲ್ಲೇ ಎರಡನೇ ಚಿತ್ರ ನಿರ್ಮಿಸಿ, ನಿರ್ದೇಶಿಸುವ ಯೋಚನೆಯಲ್ಲಿರುವ ಅವರ ಭರವಸೆ ಯಾವ ಪರಿಯದ್ದು ಎಂದು ಯಾರು ಬೇಕಾದರೂ ಯೋಚಿಸಬಹುದು.

ಅಷ್ಟೇ ಅಲ್ಲ, ಇತರ ನಿರ್ಮಾಪಕರ ಚಿತ್ರವನ್ನು ನಿರ್ದೇಶಿಸುವ ಆಫರ್ ಬಂದರೆ ತಿರಸ್ಕರಿಸುವುದಿಲ್ಲ ಎಂದೂ ಹೇಳಿದ್ದಾರೆ. ನಿರ್ಮಾಪಕರು ಏನಂತಾರೋ?
ಇವನ್ನೂ ಓದಿ