ಚಿತ್ರವೊಂದು ಹಿಟ್ ಆದಾಗ ತಮ್ಮ ಸಹಾಯಕರ ಮೂಲಕ ರೂಮರ್ ಹಬ್ಬಿಸಿ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಳ್ಳುವ ನಾಯಕ ನಟರು, ಆಗಾಗ ತಮ್ಮ ಚಿತ್ರಗಳು ನೆಲ ಕಚ್ಚಿದಾಗ ಸುಮ್ಮನಿರುವುದು ಸಾಮಾನ್ಯ. ಕನ್ನಡ ಚಿತ್ರಗಳೆಂದರೆ ಸೀಮಿತ ಮಾರುಕಟ್ಟೆ ಎಂಬುದರ ಹೊರತಾಗಿಯೂ ಈ ಬಗ್ಗೆ ನಾಯಕರು ಯಾವತ್ತೂ ತಲೆ ಕೆಡಿಸಿಕೊಂಡವರಲ್ಲ.
ಅದೆಷ್ಟೇ ಸಮಾನತೆ ಎಂದರೂ ಚಿತ್ರರಂಗವು ನಾಯಕರಿಗೆ ಕೊಡುವ ಶೇ.30ರ ಸಂಭಾವನೆಯನ್ನೂ ನಾಯಕಿಯರಿಗೆ ನೀಡುತ್ತಿಲ್ಲ ಎಂದು ಇತ್ತೀಚೆಗಷ್ಟೇ ಒಬ್ಬಾಕೆ ಹೇಳಿಕೊಂಡಿದ್ದರು. ಒಟ್ಟಾರೆ ಹೋಲಿಕೆ ಮಾಡಿದಾಗ, ನಿರ್ಮಾಪಕರ ಜಾಗದಲ್ಲಿ ನಿಂತು ನೋಡಿದಾಗ, ಸಂಭಾವನೆ ವಿಚಾರದಲ್ಲಿ ನಾಯಕಿಯರೇ ವಾಸಿ.
ನಮ್ಮ ನಾಯಕರು-ನಾಯಕಿಯರು ಸಂಭಾವನೆ ಎಷ್ಟು ಪಡೆಯುತ್ತಾರೆ ಎಂಬ ಕುತೂಹಲ ಸಹಜವಾಗಿಯೇ ನಿಮ್ಮಲ್ಲೂ ಇರುತ್ತದೆ. ವಿವಿಧ ಮೂಲಗಳನ್ನು ಆಧರಿಸಿ ನಾವು ಮಾಡಿರುವ ಪಟ್ಟಿ ಮುಂದಿನ 10 ಪುಟಗಳಲ್ಲಿದೆ. ಇದೇ ಖಚಿತವಾಗಿರಲಾರದು, ಕೊಂಚ ಹೆಚ್ಚು ಅಥವಾ ಕಡಿಮೆಗಳ ಲೆಕ್ಕಾಚಾರಗಳಿರಬಹುದು.
PR
ಪವರ್ ಸ್ಟಾರೇ ನಂ.1.. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಂಬರ್ ವನ್ ನಾಯಕನಾಗಿ ಮಿಂಚುತ್ತಿರುವವರು. ಅವರ ಎಲ್ಲಾ ಚಿತ್ರಗಳು ಹಿಟ್ ಅಥವಾ ಸೂಪರ್ ಹಿಟ್ ಆಗಿಲ್ಲವಾದರೂ, ನಿರ್ಮಾಪಕರು ಸಂಪೂರ್ಣವಾಗಿ ನೆಲ ಕಚ್ಚಿರುವ ಉದಾಹರಣೆ ಕಡಿಮೆ.
ಇತ್ತೀಚೆಗಷ್ಟೇ ಸೂರಿ ನಿರ್ದೇಶನದ 'ಜಾಕಿ' ಜಯಭೇರಿ ಬಾರಿಸಿದ ಮೇಲಂತೂ ಅವರ ಸಂಭಾವನೆ 2.5 ಕೋಟಿ ರೂಪಾಯಿಗಳಿಗೆ ಏರಿದೆಯಂತೆ. ಇದಕ್ಕೆ ಒತ್ತಾಸೆಯಾಗಿರುವುದು ಜಾಕಿ ಬರೋಬ್ಬರಿ 30 ಕೋಟಿ ರೂಪಾಯಿ ಬಾಚಿಕೊಂಡಿರುವುದು. ಯೋಗರಾಜ್ ಭಟ್, ಸೂರಿ ಅವರಂತಹ ಘಟಾನುಘಟಿ ನಿರ್ದೇಶಕರು ಬೆನ್ನ ಹಿಂದಿರುವಾಗ ಸಂಭಾವನೆ ಕೂಡ ಸಾಮಾನ್ಯ ಸ್ಥಿತಿಯಲ್ಲಿರುವುದು ಕಷ್ಟ!