ಕನ್ನಡ ಕನಸುಗಾರ ವಿ. ರವಿಚಂದ್ರನ್‌ಗೆ ಹೃದಯಾಘಾತವಾಗಿದೆಯಂತೆ, ಆರೋಗ್ಯ ಏರುಪೇರಾಗಿದೆಯಂತೆ ಎಂದು ಎಸ್ಎಂಎಸ್ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಸುದ್ದಿ ಹರಡಿರುವುದಕ್ಕೆ ಸ್ವತಃ ಪ್ರತಿಕ್ರಿಯೆ ನೀಡಿರುವ ಕ್ರೇಜಿ ಸ್ಟಾರ್, ಇನ್ನಷ್ಟು ಹಿಟ್ ಚಿತ್ರಗಳನ್ನು ನೀಡದ ಹೊರತು ಆ ಸುದ್ದಿಗಳು ನಿಜವಾಗವು ಎಂದಿದ್ದಾರೆ.
ರವಿಚಂದ್ರನ್ ಕುರಿತ ರೂಮರ್ ಹರಡಿರುವುದು ಫೆಬ್ರವರಿ 21ರ ಭಾನುವಾರ ರಾತ್ರಿ. ಯಾರೋ ಕಿಡಿಗೇಡಿಗಳು ತಮ್ಮ ವಿಕೃತಿಯನ್ನು ಸಂತೃಪ್ತಗೊಳಿಸಲು ಹೂಡಿರುವ ತಂತ್ರವಿದು. ಅದನ್ನೇ ನಿಜವೆಂದು ನಂಬಿದ ಚಿತ್ರರಂಗದ ಸ್ನೇಹಿತರು, ಪತ್ರಕರ್ತರು ಮತ್ತು ಅಭಿಮಾನಿಗಳು ತೀವ್ರ ಆತಂಕಕ್ಕೀಡಾಗಿದ್ದರು. ರವಿಚಂದ್ರನ್ ಅವರ ಆಪ್ತರನ್ನು ಸಂಪರ್ಕಿಸಲು ಯತ್ನಿಸಿದ್ದರು.
ಎಲ್ಲೋ ಎಡವಟ್ಟಾಗಿದೆ ಎಂಬುದು ಆ ಹೊತ್ತಿಗೆ ಅವರ ಸಹೋದರ ಬಾಲಾಜಿಗೆ (ಈಶ್ವರ್) ಖಚಿತವಾಗಿತ್ತು. ನಮ್ಮಣ್ಣನಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ. ಆರೋಗ್ಯ ಹದಗೆಟ್ಟಿದೆ ಎನ್ನುವುದು ಶುದ್ಧ ಸುಳ್ಳು. ಈಗಷ್ಟೇ ಗೋವಾದಿಂದ ಬಂದಿದ್ದಾರೆ ಎಂದು ತಡರಾತ್ರಿ ಮನೆಯೆದುರು ನೆರೆದಿದ್ದ ಪತ್ರಕರ್ತರು ಮತ್ತು ಇತರರಿಗೆ ಸ್ಪಷ್ಟನೆ ನೀಡಿದರು. ಪೊಲೀಸರು ಮಧ್ಯಪ್ರವೇಶ ಮಾಡುವ ಸ್ಥಿತಿಯೂ ಒಂದು ಹಂತದಲ್ಲಿ ಉದ್ಭವಿಸಿತ್ತು.
ಇತ್ತೀಚೆಗಷ್ಟೇ ತನ್ನ ವಿವಾಹದ ಬೆಳ್ಳಿಹಬ್ಬ ಸಂಭ್ರಮದಲ್ಲಿ ಆಪ್ತರಿಂದ, ಹಿರಿಯರಿಂದ ಆಶೀರ್ವಾದ-ಹಾರೈಕೆಗಳನ್ನು ಪಡೆದುಕೊಂಡಿದ್ದ, ಹಳೆ ಗೆಳೆಯ ಹಂಸಲೇಖಾ ಜತೆ ಮರು ಮಿಲನಗೊಂಡಿದ್ದ ರವಿಚಂದ್ರನ್ ಹರಡಿರುವ ಸುದ್ದಿಗಳಿಗೆ ಭಾಗಶಃ ಅಚ್ಚರಿಗೊಂಡಿದ್ದಾರೆ. ಜತೆಗೆ ನಕ್ಕು ಬಿಟ್ಟಿದ್ದಾರೆ.
ಈ ರೂಮರುಗಳಿಂದಾಗಿ ನಾನು ಇನ್ನಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಲು ಸಾಧ್ಯವಾಗುತ್ತದೆಯೇ ಹೊರತು ಇನ್ನೇನೂ ಆಗದು. ನನಗೇನೂ ಆಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.