'ಹೌಸ್ ಫುಲ್' ಚಿತ್ರದ ಮೂಲಕ ಪ್ರೇಕ್ಷಕರನ್ನು ಒಂದಷ್ಟು ನಗಿಸಿ ಕಿರು ತೆರೆಗೆ ಹೋಗಿದ್ದ ಹೇಮಂತ್ ಹೆಗ್ಡೆ ಈಗ ಮತ್ತೆ ಗಾಂಧಿನಗರಕ್ಕೆ ವಾಪಸಾಗಿದ್ದು ಹೊಸ ಚಿತ್ರವೊಂದನ್ನು ನಿರ್ದೇಶಿಸಲು ತಯಾರಿ ನಡೆಸಿದ್ದಾರೆ.
ಚಿತ್ರಕ್ಕೆ 'ಬಯ್ಯೋ ಭಾಮಾ ಅಯ್ಯೋ ರಾಮಾ' ಎಂಬ ಹೆಸರಿಡಲಾಗಿದೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮೇಲೆ ಕಥೆ ಹೆಣೆಯಲಾಗಿದೆಯಂತೆ. ಬೆಟ್ಟಿಂಗ್ನಲ್ಲೂ ಕಾಮಿಡೀನಾ ಎಂದು ಪ್ರಶ್ನಿಸಿದರೆ 'ಯಾವುದಕ್ಕೂ ತೆರೆಯ ಮೇಲೆ ಚಿತ್ರ ನೋಡಿ ನಕ್ಕು ನಲಿಯಿರಿ' ಎಂದಷ್ಟೇ ಉತ್ತರಿಸುತ್ತಾರೆ ಹೇಮಂತ್.
ತಮ್ಮ ಎನ್.ಆರ್.ಐ. ಮಿತ್ರರ ಜತೆ ಸೇರಿ ಚಿತ್ರವನ್ನು ನಿರ್ಮಿಸಲಿದ್ದು ಈ ಹಾಸ್ಯ ಚಿತ್ರಕ್ಕೆ ನಾಯಕರಾಗಿ ಸ್ವತಃ ಹೇಮಂತ್ ಅವರೇ ನಟಿಸಲಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿರುತ್ತಾರೆ. ಸದ್ಯ ರಾಗಿಣಿ ಮತ್ತು ನಿಧಿ ಸುಬ್ಬಯ್ಯ ಜತೆ ಮಾತುಕತೆ ಸಾಗಿದ್ದು ಅವರ ಡೇಟ್ಸ್ ಓಕೆ ಆಗಿದೆಯಂತೆ.
ಇನ್ನೊಬ್ಬ ನಾಯಕಿಯನ್ನು ಬಾಲಿವುಡ್ನಿಂದ ಕರೆತರಲಾಗುತ್ತದೆ. ಚಿತ್ರಕ್ಕೆ ಸುರೇಶ್ ಬೈರಸಂದ್ರ ಅವರ ಛಾಯಾಗ್ರಹಣ ಮತ್ತು ವೀರ್ ಸಮರ್ಥ್ ಸಂಗೀತ ನೀಡಲಿದ್ದಾರೆ ಹಾಗೂ ಚಿತ್ರವನ್ನು ಸ್ವತಃ ಹೇಮಂತ್ ಹೆಗ್ಡೆ ನಿರ್ದೇಶಿಸಲಿದ್ದಾರೆ.