ಚಿತ್ರಕ್ಕೆ ಊರುಗಳ ಹೆಸರಿಡುವುದು, ಆ ಮೂಲಕ ಗೆಲುವಿನ ನಗೆ ಬೀರುವುದು ನಿರ್ದೇಶಕ ಓಂ ಪ್ರಕಾಶ್ ರಾವ್‌ಗೆ ಖುಶಿ ಮತ್ತು ಥ್ರಿಲ್ ಕೊಡುವ ಸಂಗತಿ ಇರಬೇಕು. ಅವರು 'ಕಲಾಸಿಪಾಳ್ಯ'ದಿಂದ ಹೊರಟವರು ಈಗ 'ಕಾಟನ್ ಪೇಟೆ'ಗೆ ಬಂದಿದ್ದಾರೆ.
ಕಲಾಸಿಪಾಳ್ಯ, ಮಂಡ್ಯ, ಹುಬ್ಬಳ್ಳಿ, ಬೆಳಗಾಂ ಓಂಪ್ರಕಾಶ್ ರಾವ್ ಅವರ ಚಿತ್ರಗಳ ಶೀರ್ಷಿಕೆಗಳು. ಈಗ 'ಕಾಟನ್ ಪೇಟೆ' ಸರದಿ. ಊರುಗಳ ಹೆಸರಿಟ್ಟುಕೊಂಡೇ ಸೋಲು ಗೆಲುವಿನ ಚದುರಂಗದಾಟದಲ್ಲಿ ಸರಾಸರಿ ಜಯವನ್ನೇ ಸಾಧಿಸುತ್ತಾ ಬಂದಿರುವ ಓಂ ಪ್ರಕಾಶ್ ಅವರ 'ಕಾಟನ್ ಪೇಟೆ'ಗೆ ನಟ ಆದಿತ್ಯ ನಾಯಕ.
ಪ್ರೀತಿಸಿದ ಹುಡುಗಿಯನ್ನು ಪಡೆಯಲು ಏನೆಲ್ಲಾ ಸಾಹಸಗಳನ್ನು ಮಾಡಬೇಕಾಗುತ್ತದೆ ಎಂಬುದೇ 'ಕಾಟನ್ ಪೇಟೆ'ಯ ತಿರುಳಂತೆ.
ಚಿತ್ರದ ನಾಯಕಿಗಾಗಿ ಹುಡುಕಾಟ ಸಾಗಿದ್ದು, 'ಕಾಟನ್ ಪೇಟೆ'ಯಲ್ಲಿಯೂ ಓಂಪ್ರಕಾಶ್ ಅವರ ನೆಚ್ಚಿನ ಕಲಾವಿದರಾದ ಸ್ವಸ್ತಿಕ್ ಶಂಕರ್, ಶೋಭರಾಜ್ ಮತ್ತಿತರರು ಅಭಿನಯಿಸಲಿದ್ದಾರೆ. ಕೆಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಗೆಲುವು ಕಾಣದೆ, ಭರವಸೆಯ ನಟನೂ ಅನ್ನಿಸಿಕೊಳ್ಳದೆ ಒದ್ದಾಡುತ್ತಿರುವ ನಾಯಕ ನಟ ಆದಿತ್ಯ ಶತಾಯ ಗತಾಯ 'ಕಾಟನ್ ಪೇಟೆ'ಯಲ್ಲಾದರೂ ಗೆಲ್ಲಲು ಮನಸ್ಸು ಮಾಡಿದಂತಿದೆ.