ಕನ್ನಡ ಚಿತ್ರರಂಗ ತೆಲುಗಿನಷ್ಟು ದೊಡ್ಡದಲ್ಲ: ಅಲ್ಲು ಅರ್ಜುನ್
ಗುರುವಾರ, 24 ಫೆಬ್ರವರಿ 2011( 16:15 IST )
ಇತ್ತೀಚೆಗಷ್ಟೇ ತನ್ನ ಮದುವೆ ಆಮಂತ್ರಣ ಪತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲೆಂದು ಬಂದಿದ್ದ ತೆಲುಗು ನಟ ಅಲ್ಲು ಅರ್ಜುನ್, ಕನ್ನಡ ಚಿತ್ರರಂಗವು ತೆಲುಗಿನಷ್ಟು ದೊಡ್ಡದಲ್ಲ. ಹಾಗೆಂದು ಅದು ಚಿಕ್ಕದೆಂದು ಯಾರೂ ಭಾವಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
ಮಾರ್ಚ್ 6ರಂದು ಹೈದರಾಬಾದಿನಲ್ಲಿ ಸ್ನೇಹಾ ರೆಡ್ಡಿಯನ್ನು ಅಲ್ಲು ಅರ್ಜುನ್ ವರಿಸಲಿದ್ದಾರೆ.
ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಪತ್ರಕರ್ತರ ಜತೆ ಮಾತಿಗಿಳಿದ ಅವರು, ಕನ್ನಡದ ಹಲವು ಚಿತ್ರಗಳನ್ನು ನೋಡಿದ್ದೇನೆ; ಪುನೀತ್ ನಟಿಸಿರುವ ಜಾಕಿ ಚಿತ್ರವನ್ನು ಇತ್ತೀಚೆಗಷ್ಟೇ ವೀಕ್ಷಿಸಿದ್ದೇನೆ. ಕನ್ನಡ ಚಿತ್ರಗಳಲ್ಲಿ ನಟಿಸಲು ನನ್ನದೇನೂ ಅಭ್ಯಂತರವಿಲ್ಲ ಎಂದರು.
WD
ನಿಮ್ಮ ಸೋದರ ಮಾವ ಚಿರಂಜೀವಿ ಅವರು ವರನಟ ಡಾ. ರಾಜ್‌ಕುಮಾರ್ ಕುಟುಂಬದೊಂದಿಗೆ ಆಪ್ತ ಸಂಬಂಧವನ್ನು ಉಳಿಸಿಕೊಂಡು ಬಂದವರು. ಶಿವರಾಜ್ ಕುಮಾರ್ ಅವರ ಜೋಗಯ್ಯ ಮುಹೂರ್ತ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ನಿಮಗೂ ಅದೇ ರೀತಿಯ ಸಂಬಂಧಗಳಿವೆಯೇ ಎಂದು ಪ್ರಶ್ನಿಸಿದಾಗ, ಪುನೀತ್ ಮತ್ತು ತಾನು ಆಪ್ತರು ಎಂದುತ್ತರಿಸಿದರು.
ಪುನೀತ್ ಹೈದರಾಬಾದಿಗೆ ಬಂದಾಗಲೆಲ್ಲ ನಮ್ಮ ಮನೆಗೆ ಬಂದೇ ಬರುತ್ತಾರೆ. ಆಗ ಮಧ್ಯಾಹ್ನ ಅಥವಾ ರಾತ್ರಿ ಊಟ ನಮ್ಮ ಮನೆಯಲ್ಲೇ ನಡೆಯುತ್ತದೆ. ನಾನು ಬೆಂಗಳೂರಿಗೆ ಬಂದರೆ, ಪುನೀತ್‌ರನ್ನು ಭೇಟಿಯಾಗದೆ ಹೋಗಲ್ಲ ಎಂದು ಅಲ್ಲು ಅರ್ಜುನ್ ವಿವರಿಸಿದರು.
ಹಬ್ಬಿರುವ ರೂಮರುಗಳಿಗೆ ಸ್ಪಷ್ಟನೆ ನೀಡಿದ ಅವರು, 'ಜಾಕಿ' ಚಿತ್ರವನ್ನು ತೆಲುಗಲ್ಲಿ ರಿಮೇಕ್ ಮಾಡುವ ಯಾವುದೇ ಯೋಚನೆ ನಮ್ಮ ಮುಂದಿಲ್ಲ. ಆದರೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಸಿದ್ಧನಿದ್ದೇನೆ. ಅತ್ಯುತ್ತಮ ಚಿತ್ರಕಥೆ ಮತ್ತು ನಿರ್ಮಾಪಕರು ಮುಂದೆ ಬಂದರೆ ಓಕೆ. ತೆಲುಗು ಚಿತ್ರರಂಗದಷ್ಟು ಕನ್ನಡ ಚಿತ್ರರಂಗ ದೊಡ್ಡದಾಗಿಲ್ಲ. ಸಾಕಷ್ಟು ನಿರ್ಮಾಪಕರಿಗೆ ಸಂಭಾವನೆ ನೀಡುವುದೇ ಕಷ್ಟವೆನಿಸಬಹುದು ಎಂದರು.
ಹಾಗೆಂದು ಕನ್ನಡ ಚಿತ್ರರಂಗವನ್ನು ಚಿಕ್ಕದು ಎಂದು ಹೇಳಲಾಗದು. ಜೋಗಿ, ಮುಂಗಾರು ಮಳೆಯಂತಹ ಸಾಕಷ್ಟು ಚಿತ್ರಗಳು ಅಲ್ಲಿ ಬಂದಿವೆ. ಕನ್ನಡ ಸಿನಿಮಾಗಳು ಯಾವ ಲೆಕ್ಕದಲ್ಲೂ ಯಾರಿಗೂ ದ್ವಿತೀಯ ದರ್ಜೆಯ ಚಿತ್ರಗಳಲ್ಲ ಎನ್ನುವುದು ಸಾಬೀತಾಗಿವೆ. ಹಾಗೆ ನೋಡಿದರೆ ತೆಲುಗಿನಲ್ಲೂ ಕಡಿಮೆ ಬಜೆಟಿನ ಕೆಲವು ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಲ್ಲು ಅರ್ಜುನ್ ವಿವಾಹ ಸಮಾರಂಭಕ್ಕೆ ಆಹ್ವಾನಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಶಿವಣ್ಣ, ಅವರು ನನ್ನ ಸಹೋದರನಿದ್ದಂತೆ ಎಂದು ಹೇಳಿದ್ದು, ಮದುವೆಗೆ ಹೋಗಲಿದ್ದೇವೆ ಎಂದಿದ್ದಾರೆ.