ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 99ನೇ ಚಿತ್ರ 'ಮೈಲಾರಿ' 50 ದಿನಗಳನ್ನು ಪೂರೈಸಿದ್ದು, ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಇತ್ತೀಚೆಗಷ್ಟೇ ಶಿವಣ್ಣ ಅಭಿಮಾನಿಗಳ ವತಿಯಿಂದ ಸಮಾರಂಭ ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂಬರೀಶ್ ಲವಲವಿಕೆಯಿಂದ ಮಾತನಾಡಿದರು.
'ಒಬ್ಬ ನಾಯಕ ನಟನಾಗಿ ಚಿತ್ರರಂಗದಲ್ಲಿ 25 ವರ್ಷ ಪೂರೈಸಿಯೂ ಬೇಡಿಕೆ ಉಳಿಸಿಕೊಳ್ಳುವುದು ಹುಡುಗಾಟದ ಮಾತಲ್ಲ. ನಮ್ಮ ಶಿವಣ್ಣ 25 ವರ್ಷಗಳ ಅವಧಿಯಲ್ಲಿ ನೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗಿರುವ ಬೇಡಿಕೆಯನ್ನು ಗಮನಿಸಿದರೆ ಅವರು ಬಲು ಬೇಗ ಇನ್ನೂರು ಚಿತ್ರಗಳನ್ನೂ ಪೂರೈಸುತ್ತಾರೆ' ಎಂದು ಭಾರೀ ಚಪ್ಪಾಳೆಗಳ ನಡುವೆ ಹೇಳಿದರು.
'ಮೈಲಾರಿ' ಚಿತ್ರದ 'ಊರಿಂದ ಓಡಿ ಬಂದೆ' ಗೀತೆಯನ್ನು ಪ್ರದರ್ಶಿಸುವುದರೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಅದರಲ್ಲಿ ಹೆಣ್ಣು ಮಕ್ಕಳನ್ನು ಕಂಡ ಮೈಲಾರಿ ಹೆದರಿ ಓಡುತ್ತಾನೆ. ಅದನ್ನು ನೋಡಿದ ಅಂಬರೀಷ್ 'ಹುಡುಗೀರು ಅಂದ್ರೆ ಸಾಕು ನಮ್ಮ ಶಿವಣ್ಣ ಯಾಕೋ ಹೆದರಿ ಓಡಿ ಹೋಗ್ತಾರೆ! ಥೇಟ್ ಅಣ್ಣಾವ್ರ ತರಾನೇ. ಆದರೆ ಹುಡುಗೀರು ಮಾತ್ರ ಶಿವಣ್ಣ ಅಂದ್ರೆ ಪ್ರಾಣ ಬಿಡ್ತಾರೆ. ಹುಡುಗಿಯರಿಗೆ ಶಿವಣ್ಣ ಅಂದ್ರೆ ತುಂಬಾ ಇಷ್ಟ' ಎಂದಾಗ ಎಲ್ಲರೂ ನಕ್ಕರು.
ಪಕ್ಕದಲ್ಲೇ ಶಿವಣ್ಣನ ಪತ್ನಿ ಇದ್ದುದನ್ನು ಗಮನಿಸಿದ ಅಂಬಿ ಕೂಡಲೇ 'ಗೀತಕ್ಕಾ ನೀವೇನೂ ಹೆದರಬೇಡಿ. ಶಿವಣ್ಣ ಯಾವ ಹುಡುಗಿಯನ್ನೂ ಮುಟ್ಟೊದಿಲ್ಲ' ಎಂದು ಒಗ್ಗರಣೆ ಹಾಕಿದಾಗಲಂತೂ ಮತ್ತೊಮ್ಮೆ ಎಲ್ಲರೂ ನಗೆಗಡಲಲ್ಲಿ ತೇಲಿದರು.
'ಮೈಲಾರಿ' ಸಂಭ್ರಮವು 50 ದಿನಗಳ ಸಡಗರಕ್ಕಷ್ಟೇ ಸೀಮಿತವಾಗದೆ ವರ್ಷವೀಡೀ ನಡೆಯುತ್ತಿರಬೇಕು' ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದಾಗ ಅಭಿಮಾನಿಗಳಿಂದ ಭಾರೀ ಹರ್ಷೋದ್ಘಾರ ಕೇಳಿ ಬಂತು.
ಶಿವರಾಜ್ ಕುಮಾರ್ ಅವರಲ್ಲಿ ನಾಯಕತ್ವದ ಗುಣಗಳಿವೆ ಎಂದು ನರೇಂದ್ರಬಾಬು ಹೇಳಿದರೆ, ಶಿವಣ್ಣ ಎವರ್ ಗ್ರೀನ್ ಹೀರೋ ಅಂದರು ಭಾಷಾ. ಕನ್ನಡ ಚಿತ್ರಗಳ ಬಗ್ಗೆ ಉದಾಸೀನ ಬೇಡ ಎಂದು ಶಿವಣ್ಣ ಕಳಕಳಿಯಿಂದ ವಿನಂತಿಸಿದರು. ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಚೆನ್ನಾಗಿ ಹಣ ಗಳಿಸುತ್ತಿರುವಾಗ ಕನ್ನಡ ಸಿನೆಮಾಗಳೇಕೆ ಸೊರಗಬೇಕು ಎಂದು ಅವರು ಪ್ರಶ್ನಿಸಿದರು.