ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷೆಯ ನೂರನೇ ಚಿತ್ರ 'ಜೋಗಯ್ಯ' ಚಿತ್ರದ ಅದ್ಧೂರಿ ಆಡಿಯೋ ಬಿಡುಗಡೆ ಕಾರ್ಯಕ್ರಮವು ಮಹಾಶಿವರಾತ್ರಿಯಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಕನ್ನಡ ಚಿತ್ರರಂಗದಲ್ಲಿ ಇಪ್ಪತ್ತೈದು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ, ಶಿವಣ್ಣ ತನ್ನ ಪತ್ನಿ ಗೀತಾ ಹಾಗೂ ಸಂಗಡಿಗರೊಂದಿಗೆ ಅದ್ಧೂರಿ ಬೆಳ್ಳಿಹಬ್ಬವನ್ನು ಮಾರ್ಚ್ ಎರಡರಂದು ಹಮ್ಮಿಕೊಂಡಿದ್ದಾರೆ. ಈ ಸಮಾರಂಭವನ್ನು ಇನ್ನಷ್ಟು ಅಂದಗಾಣಿಸಲು ಮೂರು ಗಂಟೆಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗ ಹಮ್ಮಿಕೊಂಡಿದೆ. ಇದೇ ವೇಳೆಯಲ್ಲಿ ಬಹು ನಿರೀಕ್ಷಿತ 'ಜೋಗಯ್ಯ' ಆಡಿಯೋ ಬಿಡುಗಡೆ ಕಾರ್ಯವೂ ನಡೆಯಲಿದೆ.
ಅರಮನೆ ಮೈದಾನದಲ್ಲಿ ನಾಳೆ ನಡೆಯಲಿರುವ ಅದ್ಧೂರಿ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಹಿರಿಯ ಕಿರಿಯ ನಟರೆಲ್ಲ ಸಜ್ಜಾಗುತ್ತಿದ್ದಾರೆ. ನಾಳೆಯ ಸಮಾರಂಭದಲ್ಲಿ ಶಿವಣ್ಣನೊಂದಿಗೆ ಮಾಲಾಶ್ರೀ ಕೂಡ ಹೆಜ್ಜೆಹಾಕಿ ಅಭಿಮಾನಿಗಳಿಗೆ ಹಳೆಯ ನೆನೆಪುಗಳನ್ನು ಮರುಕಳಿಸಲ್ಲಿದ್ದಾರೆ. ರಮೇಶ್, ರಾಧಿಕಾ ಪಂಡಿತ್, ಚಿರಂಜೀವಿ ಸರ್ಜಾ ಸೇರಿದಂತೆ ಹೊಸ, ಹಳೆಯ ನಟರ ಸಮಾಗಮದಲ್ಲಿ ಶಿವಣ್ಣನ ಬೆಳ್ಳಿಹಬ್ಬ ವಿಜ್ರಂಬಿಸಲಿದೆ.
'ಜೋಗಯ್ಯ' ಕ್ಯಾಸೆಟ್ಟುಗಳ ಎಲ್ಲಾ ಹಕ್ಕುಗಳನ್ನು ಅಶ್ವಿನಿ ರೆರ್ಕಾಡಿಂಗ್ ಕಂಪನಿ ಹೊಂದಿದ್ದು, ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಮಾರುಕಟ್ಟೆಯೆಲ್ಲೆಡೆ ಜೋಗಯ್ಯ ಅಲೆ ಹೆಚ್ಚುತ್ತಿದ್ದಂತೆ, ಸಿಡಿ ಪೈರಸಿ ಬಗ್ಗೆ ತಲೆಕೆಡಿಸಿಕೊಂಡಿರುವ ನಿರ್ಮಾಪಕರು, ಅದಕ್ಕಾಗಿ ಲಾಕಿಂಗ್ ಸಿಸ್ಟಮ್ ತಂತ್ರಜ್ಞಾನವನ್ನು ಸಿಡಿಗೆ ಅಳವಡಿಸಿದ್ದಾರೆ. ಅಲ್ಲದೆ ಆನ್‌ಲೈನ್ ಮತ್ತು ಆಫ್ ಲೈನ್‌ನಲ್ಲಿ ಭದ್ರತೆ ಕಾಪಾಡಲು ಖಾಸಗಿ ಪತ್ತೇದಾರರನ್ನು ನಿಯೋಜಿಸಿದ್ದಾರೆ.
ಶಿವಣ್ಣನ ಯಶಸ್ವಿ ಚಿತ್ರ 'ಜೋಗಿ'ಯ ಮುಂದುವರಿದ ಭಾಗ 'ಜೋಗಯ್ಯ'. ಅಂತೆಯೇ ಜೋಗಿ ಚಿತ್ರದಲ್ಲಿ ಒಂದಾಗಿದ್ದ ದಂಪತಿ ಜೋಡಿ ನಿರ್ಮಾಪಕಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್, ಜೋಗಯ್ಯದಲ್ಲಿ ಮತ್ತೊಮ್ಮೆ ಜತೆಯಾಗಿ ಶ್ರಮಿಸಿದ್ದಾರೆ. 'ರಾಜ್' ಚಿತ್ರದ ನಂತರ ಪ್ರೇಮ್ ಯಾವುದೇ ಚಿತ್ರಗಳನ್ನು ಒಪ್ಪಿರಲಿಲ್ಲ.