ಎಂ.ಎನ್.ಕುಮಾರ್ ನಿರ್ಮಾಣ ಹಾಗೂ ಮೋಹನ್ ನಿರ್ದೇಶನದ 'ನರಸಿಂಹ' ಚಿತ್ರದಲ್ಲಿ ಮತ್ತೆ ಒಂದುಗೂಡಿರುವ 'ಪ್ರೇಮಲೋಕ'ದ ಪ್ರಖ್ಯಾತ ಹಂಸಲೇಖ-ರವಿಚಂದ್ರನ್ ಜೋಡಿ ಇನ್ನೊಂದು ಚಿತ್ರದಲ್ಲೂ ಮುಂದುವರಿಯುವ ಸಾಧ್ಯತೆಗಳು ಬಲವಾಗಿವೆ.
ಈ ಬಾರಿ ರವಿಚಂದ್ರನ್ ಅಭಿನಯದ ಹೊಸ ಚಿತ್ರವನ್ನು ಹಂಸಲೇಖ ಅವರೇ ನಿರ್ದೇಶಿಸುತ್ತಿರುವುದು ವಿಶೇಷ. ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಎಂಬುದನ್ನು ಸ್ವಯಂ ಹಂಸಲೇಖ ಅವರೇ ಖಚಿತಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಹಂಸಲೇಖ 'ಅಂದಗಾರನ ಅಭಿನಯದ ಚಿತ್ರವನ್ನು ಕಥನ ಕಾವ್ಯವಾಗಿ ಚಿತ್ರಿಸುವ ನನ್ನ ಆಶಯಕ್ಕೆ ಕಾಲ ಸನ್ನಿಹಿತವಾಗಿದೆ. ಈ ಚಿತ್ರದ ಎಲ್ಲ ಆದಾಯವನ್ನು ದೇಸಿ ವಿದ್ಯಾ ಸಂಸ್ಥೆಯ ಅಭಿವೃದ್ದಿಗೆ ಬಳಸಿಕೊಳ್ಳಲಾಗುವುದು. ಇದಕ್ಕೆ ರವಿಚಂದ್ರನ್ ಅವರೂ ಒಪ್ಪಿಗೆ ಕೊಟ್ಟಿದ್ದಾರೆ' ಎಂದು ಸಂತಸದಿಂದಲೇ ತಿಳಿಸಿದರು.
ರವಿಚಂದ್ರನ್ ಜತೆಗಿನ ಹೊಸ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹಂಸಲೇಖ 'ಈ ಹಿಂದೆ ನಾನು ಪಕ್ವವಾಗಿರಲಿಲ್ಲ. ಈಗ ನಾನು ಪಕ್ವವಾಗಿದ್ದೇನೆ. ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದೇನೆ' ಎಂದರು.