ಕನ್ನಡಕ್ಕೆ ಪರಭಾಷೆಗಳ ಚಿತ್ರಗಳೇ ರಿಮೇಕ್ ಆಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಪುನೀತ್ ರಾಜ್ ಕುಮಾರ್ ಅಭಿನಯದ ಹಿಟ್ ಕನ್ನಡ ಚಿತ್ರ 'ಜಾಕಿ' ತೆಲುಗಿಗೆ ಡಬ್ ಆಗುತ್ತಿದೆ. ಕನ್ನಡ ಚಿತ್ರಗಳನ್ನು ಪರಭಾಷೆಗೆ ಡಬ್ ಮಾಡಲು ಆಸಕ್ತಿ ವಹಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ.
'ಜಾಕಿ' ತೆಲುಗು ಚಿತ್ರದ ಧ್ವನಿಸುರುಳಿ ಇತ್ತೀಚೆಗೆ ಹೈದರಾಬಾದ್ನಲ್ಲಿ ಬಿಡುಗಡೆಯಾಯಿತು. ತೆಲುಗು ಚಿತ್ರ ರಂಗದ ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
'ಜಾಕಿ' ಕನ್ನಡ ಚಿತ್ರ ಹೊಸ ಬೆಳವಣಿಗೆಯೊಂದಕ್ಕೆ ನಾಂದಿ ಹಾಡಿದೆ. ಈ ಚಿತ್ರ ತೆಲುಗಿಗೆ ನೇರ ಡಬ್ ಆಗುತ್ತಿರುವ ಸುದ್ದಿ ಕನ್ನಡ ಚಿತ್ರರಂಗಕ್ಕೆ ಖಂಡಿತಾ ಖುಷಿ ನೀಡಬಲ್ಲ ಸಂಗತಿಯೇನೋ ನಿಜ.
ಆದರೆ ಡಬಿಂಗ್ ಮತ್ತು ರೀಮೇಕ್ ಎಂಬ ಸೋಂಬೇರಿ ಸಂಸ್ಕ್ಕತಿಯನ್ನೇ ವಿರೋಧಿಸುತ್ತಿರುವ ಕನ್ನಡ ಪರ ಸಂಘಟನೆಗಳು 'ಜಾಕಿ' ಡಬಿಂಗ್ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದೇ ಪ್ರಶ್ನೆ.