'ಕೆಂಪೇಗೌಡ' ಬಿಡುಗಡೆಯಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾನೆ. 'ಸೂಪರ್', 'ಜಾಕಿ' ಚಿತ್ರಗಳು ಬಿಡುಗಡೆಗೊಂಡ ಥಿಯೇಟರ್‌ಗಳ ಸಂಖ್ಯೆ ನೂರರ ಗಡಿ ದಾಟಿತ್ತು. ಇದೀಗ 'ಕೆಂಪೇಗೌಡ' ಅವುಗಳನ್ನು ಹಿಂದಕ್ಕೆ ಸರಿಸಿದ್ದಾನೆ.
ಭರ್ಜರಿ ಬಜೆಟ್‌ನ ಈ ಚಿತ್ರ ರಾಜ್ಯಾದ್ಯಂತ ಬರೋಬ್ಬರಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿದ್ದು ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಕನ್ನಡದ ಮಟ್ಟಿಗಂತೂ ಹೊಸ ದಾಖಲೆಯ ಸಂಖ್ಯೆಯಲ್ಲಿ ಚಿತ್ರ ಬಿಡುಗಡೆ ಕಾಣುತ್ತಿರುವುದು ಸಂತಸದ ಸಂಗತಿಯಾಗಿದೆ.
ತಮಿಳಿನಲ್ಲಿ ಜಯಭೇರಿ ಕಂಡಿದ್ದ 'ಸಿಂಗಂ' ಚಿತ್ರದ ರೀಮೇಕ್ ಆದರೂ ದುಬಾರಿ ಬಜೆಟ್‌ನಲ್ಲಿ ಈ ಅದ್ದೂರಿ ಚಿತ್ರವನ್ನು ನಿರ್ಮಾಪಕ ಶಂಕರೇ ಗೌಡರು ನಿರ್ಮಿಸಿದ್ದಾರೆ. ಈ ಹಿಂದೆ 'ವೀರಮದಕರಿ'ಯಲ್ಲಿ ಪೊಲೀಸ್ ಪಾತ್ರದಲ್ಲಿ ಕಂಗೊಳಿಸಿದ್ದ ನಟ-ನಿರ್ದೇಶಕ ಸುದಿಪ್ ಅವರು 'ಕೆಂಪೇಗೌಡ' ಚಿತ್ರದಲ್ಲಿ ಮತ್ತೆ ಖಾಕಿ ಖದರ್‌ನಲ್ಲಿ ಮಿಂಚಲಿದ್ದಾರೆ.
ಈಗಾಗಲೇ ಚಿತ್ರದ ಓಪನಿಂಗ್ ಹಾಡಿನಲ್ಲಿ ನಾನೂರಕ್ಕೂ ಹೆಚ್ಚು ನೃತ್ಯ ಕಲಾವಿದರನ್ನು ಬಳಸಿಕೊಂಡಿರುವುದು ಒಂದೆಡೆಯಾದರೆ, ಅದೇ ಹಾಡಿಗೆ ಕನ್ನಡದ ಅನೇಕ ಯುವ ನಟರು ಸುದಿಪ್ ಮೇಲಿನ ಅಭಿಮಾನದಿಂದ ಹೆಜ್ಜೆ ಹಾಕಿದ್ದಾರೆ.
ಚಿತ್ರಕ್ಕೆ ಈಗಾಗಲೇ ಹಾಕಿರುವ ಬಂಡವಾಳಕ್ಕಿಂತ ಹೆಚ್ಚು ಹಣ ಗಳಿಕೆಯಾಗಿಬಿಟ್ಟಿದೆ ಎಂಬುದು ಗಾಂಧೀನಗರದಲ್ಲಿ ಕೇಳಿಬರುತ್ತಿರುವ ಮಾತು. ಸರಿಸುಮಾರು 110ಕ್ಕೂ ಅಧಿಕ ದಿನಗಳ ಕಾಲ 'ಕೆಂಪೇಗೌಡ'ಕ್ಕೆ ಚಿತ್ರೀಕರಣ ನಡೆದಿದ್ದು ನಾಯಕ ನಟ ಸುದಿಪ್ ಅವರು ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಚಿತ್ರಮಂದಿರಕ್ಕೆ ಬರುವ ಕನ್ನಡ ಚಿತ್ರಗಳು ಬಂದಷ್ಟೇ ವೇಗದಲ್ಲಿ ಜಾಗ ಖಾಲಿ ಮಾಡುತ್ತಿರುವ ಪ್ರಸಕ್ತ ಭೀಕರ ಸನ್ನಿವೇಶದಲ್ಲಿ 'ಕೆಂಪೇಗೌಡ' ನೂತನ ದಾಖಲೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿರುವುದು ಸಹಜವಾಗಿಯೇ ಎಲ್ಲಿಲ್ಲದ ನೀರೀಕ್ಷೆಗಳನ್ನು ಗರಿಗೆದರಿಸಿದೆ ಮಾತ್ರವಲ್ಲದೆ ಅಪಾರ ಕುತೂಹಲವನ್ನೂ ಮೂಡಿಸಿದೆ.
ಇನ್ನೂ ಹೆಚ್ಚಿನ ಚಿತ್ರಮಂದಿರಗಳಿಂದ ಹೊಸ ಬೇಡಿಕೆಗಳು ಬಂದಲ್ಲಿ ಚಿತ್ರವನ್ನೊದಗಿಸಲು ಸಿದ್ಧವಿರುವುದಾಗಿ ನಿರ್ಮಾಪಕ ಶಂಕರೇ ಗೌಡರು ಈಗಾಗಲೇ ಸಾರಿದ್ದಾರೆ. ತಮಿಳಿನಲ್ಲಿ ಸೂರ್ಯ ಅಭಿನಯಿಸಿದ 'ಸಿಂಗಂ' ಭಾರೀ ಹಣ ಕೊಳ್ಳೆ ಹೊಡೆದಿತ್ತು. ಕನ್ನಡದ 'ಕೆಂಪೇಗೌಡ'ನೂ ಅದೇ ಹುಮ್ಮಸ್ಸಿನಲ್ಲಿದ್ದಾನೆ.
ಚಿತ್ರಕ್ಕಾಗಿ ಯೋಗರಾಜ ಭಟ್ ಬರೆದಿರುವ ಹಾಡುಗಳು ಈಗಾಗಲೇ ಹಲವರ ಬಾಯಲ್ಲಿ ಗುನುಗುತ್ತಿವೆ. 'ಕೋಟೆ' ಚಿತ್ರದಲ್ಲಿ ವಿಜೃಂಭಿಸಿರುವ ರವಿಶಂಕರ್ 'ಕೆಂಪೇಗೌಡ'ನಿಗೆ ಇಲ್ಲಿ ಮತ್ತೆ ಖಳನಾಯಕ. ನಟಿ ರಾಗಿಣಿ ಸುದಿಪ್‌ಗೆ ಇಲ್ಲಿ ನಾಯಕಿ.