ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ದಂಡಂ ದಶಗುಣಂ'ನಲ್ಲಿ ರಮ್ಯಾ ಮತ್ತೊಂದು ಗುಣ ಬಯಲು! (Dandam dashagunam | Ramya | Basanth kumar paatil | Madesh)
PR
ಕಿರಿಕ್ ನಟಿ ಎಂದೇ ಅಡ್ಡ ಹೆಸರು ಪಡೆದುಕೊಂಡಿರುವ ರಮ್ಯಾ ಮತ್ತೊಮ್ಮೆ ಅಂತಹುದೇ ಕಾರಣದಿಂದ ಸುದ್ದಿಯಾಗಿದ್ದಾರೆ. 'ದಂಡಂ ದಶಗುಣಂ' ಧ್ವನಿಸುರುಳಿ ಬಿಡುಗಡೆಗೆ ಬರುತ್ತೇನೆಂದು ಮಾತು ಕೊಟ್ಟಿದ್ದ ರಮ್ಯಾ ಕೊನೆಗೆ ಕೈ ಕೊಟ್ಟಿದ್ದಾರೆ. ಕಾದು ಕಾದು ಸಾಕಾಗಿ ಹೋಗಿದ್ದ ನಿರ್ಮಾಪಕ ಗಣೇಶ್ ಈಗ ರಮ್ಯಾ ವರ್ತನೆಗೆ ಕಿಡಿ ಕಾರಿದ್ದಾರೆ. ಪ್ರಕರಣ ಚಲನಚಿತ್ರ ವಾಣಿಜ್ಯ ಮಂಡಳಿವರೆಗೂ ಹೋಗಿದೆ.

ಸೋಮವಾರ ರಾತ್ರಿ ಏಳು ಗಂಟೆಗೆ ಬೆಂಗಳೂರಿನ ಪ್ರತಿಷ್ಠಿತ ಎಟ್ರಿಯಾ ಹೊಟೇಲ್‌ನಲ್ಲಿ 'ದಂಡಂ ದಶಗುಣಂ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ 'ದಂಡಂ ದಶಗುಣಂ' ಚಿತ್ರದ ನಾಯಕಿ ರಮ್ಯಾ ಅವರನ್ನು ನಿರ್ಮಾಪಕ ಗಣೇಶ್ ಆಹ್ವಾನಿಸಿದ್ದರು.

ಆರಂಭದಲ್ಲಿ ರಗಳೆ ತೆಗೆದ ರಮ್ಯಾ ತನ್ನ 32 ಲಕ್ಷ ಸಂಭಾವನೆಯಲ್ಲಿ ಬಾಕಿ ಉಳಿದಿರುವ ಹಣವನ್ನು ಕೊಟ್ಟರೆ ಬರುತ್ತೇನೆ ಎಂದಿದ್ದರು. ಈ ಕಾರಣದಿಂದ ನಿರ್ಮಾಪಕ ಗಣೇಶ್ ಸಾಲಸೋಲ ಮಾಡಿ ರಮ್ಯಾಗೆ ಕೊಡಬೇಕಿದ್ದ ಬಾಕಿ ಸಂಭಾವನೆಯನ್ನು ತೀರಿಸಿದ್ದರು. ನಂತರ ರಮ್ಯಾ ಕಾರ್ಯಕ್ರಮಕ್ಕೆ ಬರುತ್ತೇನೆಂದು ಒಪ್ಪಿಗೆ ನೀಡಿದ್ದರು.

ರಾತ್ರಿ ಏಳು ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಆಹ್ವಾನಿತರೆಲ್ಲ ಆಗಮಿಸಿದ್ದರೆ, ರಮ್ಯಾ ಮಾತ್ರ ನಾಪತ್ತೆ. ಅವರಿಗಾಗಿ ಐವತ್ತು ನಿಮಿಷ ಕಾದರೂ ರಮ್ಯಾ ಬರಲೇ ಇಲ್ಲ. ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಕೊನೆಗೆ ರಮ್ಯಾ ಗೈರು ಹಾಜರಿಯಲ್ಲೇ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು ಎಂದಿದ್ದಾರೆ ಗಣೇಶ್.

ಟ್ರಾಫಿಕ್‌ನಲ್ಲಿ ಇಕ್ಕಟ್ಟಿಗೆ ಸಿಲುಕಿರಬಹುದೆಂದು ಮತ್ತೆ-ಮತ್ತೆ ಕರೆ ಮಾಡಿದರೆ ಕೊನೆಗೆ ಸಮಯ ರಾತ್ರಿ 8.37ಕ್ಕೆ ಕರೆ ಸ್ವೀಕರಿಸಿದ ರಮ್ಯಾ, ನಾನು ಮನೆಗೆ ಪೀಠೋಪಕರಣಗಳನ್ನು ಖರೀದಿಸುತ್ತಿದ್ದೇನೆ. ಆದ್ದರಿಂದ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದುತ್ತರಿಸಿದರು.

ಮೊದಲೇ ಸಾಲ ಮಾಡಿ ಸಂಭಾವನೆ ತೀರಿಸಿದ್ದ ನಿರ್ಮಾಪಕ ಗಣೇಶ್‌ಗೆ ಪಿತ್ತ ನೆತ್ತಿಗೇರಿ ಕರೆಯನ್ನು ಸ್ಥಗಿತಗೊಳಿಸಿದರು. ಇತ್ತ ಕಾರ್ಯಕ್ರಮಕ್ಕೆ ಬಂದಿದ್ದ ಹಿರಿಯರು ಚಿತ್ರದ ನಾಯಕಿ ರಮ್ಯಾ ಹಾಜರಾಗಿದ್ದರೆ ಕಾರ್ಯಕ್ರಮ ಇನ್ನಷ್ಟು ಅಂದಗಾಣುತ್ತಿತ್ತು ಎಂದರು.

ಈ ವಿಚಾರ ಈಗ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದಿದೆ. ನಟಿ ರಮ್ಯಾ ಅವರ ಈ ನಿರ್ಲಕ್ಷ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ಅಸಮಾಧಾನಗೊಂಡಿದ್ದಾರೆ. ಚಲನಚಿತ್ರಕ್ಕೆ ಸಂಭಾವನೆ ಪಡೆದ ಮೇಲೆ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೂ ಹಾಜರಾಗಬೇಕು ಎಂಬ ನೀತಿ ರೂಪಿಸಲು ನಿರ್ಧರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಬಸಂತ್ ಕುಮಾರ್ ಪಾಟೀಲ್ ಹೇಳಿದ್ದಾರೆ.

ಒಮ್ಮೆ ಪ್ರತಿಕ್ರಿಯಿಸಿ ನಂತರ ಯಾವುದೇ ಕರೆಗಳನ್ನು ರಮ್ಯಾ ಸ್ವೀಕರಿಸದಿರುವುದಕ್ಕೆ ಗಣೇಶ್ ಗರಂ ಆಗಿದ್ದಾರೆ. ಚಿತ್ರದ ಬಿಡುಗಡೆ ಕಾರ್ಯ ಏಪ್ರಿಲ್‌ನಲ್ಲಿ ನಡೆಯಲಿದ್ದು ಆರಂಭದಲ್ಲೇ ವಿಘ್ನ ಎಂದು ಅಸಮಾಧಾನಗೊಂಡಿದ್ದಾರೆ ಗಣೇಶ್.

ತಮಿಳಿನ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ 'ಕಾಕ ಕಾಕ' ಚಿತ್ರದ ರಿಮೇಕ್‌ 'ದಂಡಂ ದಶಗುಣಂ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕನಾಗುವ ಸುದ್ಧಿ ಹರಡಿತ್ತು. ಕೊನೆಗೆ ಆ ಸ್ಥಾನಕ್ಕೆ ಚಿರಂಜೀವಿ ಸರ್ಜಾ ಆಯ್ಕೆಗೊಂಡು ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ಕುಶಾಲನಗರ ಮುಂತಾದೆಡೆ ನಡೆದಿದೆ. ಈಗಾಗಲೇ 'ರಾಮ್' ಚಿತ್ರ ನಿರ್ದೇಶಿಸಿ ಖ್ಯಾತಿ ಹೊಂದಿರುವ ಮಾದೇಶ್ ಈ ಚಿತ್ರದ ನಿರ್ದೇಶಕ. ಹರಿಕೃಷ್ಣ ಸಂಗೀತದಲ್ಲಿ ಎಲ್ಲಾ ಹಾಡುಗಳು ಹೊಸದಾಗಿ ಮೂಡಿಬಂದಿದೆ.

ನಾಯಕಿ ರಮ್ಯಾ ಈ ಹಿಂದೆ 'ದಂಡಂ ದಶಗುಣಂ' ಚಿತ್ರಕ್ಕೆ ಆಹ್ವಾನವಿತ್ತಾಗ 'ಈ ವರ್ಷ ರಿಮೇಕ್ ಚಿತ್ರದಲ್ಲಿ ನಟಿಸಬಾರದು ಎಂದಿದ್ದೆ, ಆದರೆ 'ಕಾಕ ಕಾಕ' ಚಿತ್ರದ ಮಾಯಾ (ಜ್ಯೋತಿಕಾ) ನಟನೆ ಯಾಕೊ ಇಷ್ಟವಾಗಿ ನಟಿಸಲು ಒಪ್ಪಿಕೊಂಡಿದ್ದೇನೆ. ಮತ್ತೆ ನಾನು ಇದುವರೆಗೂ ಸ್ಕೂಲ್ ಟೀಚರ್ ಪಾತ್ರದಲ್ಲಿ ನಟಿಸಿರದ ಕಾರಣ ಈ ಚಿತ್ರದಲ್ಲಿ ನನ್ನ ಹೆಚ್ಚಿನ ಪ್ರತಿಭೆಯನ್ನು ತೋರಿಸಲು ಯತ್ನಿಸುತ್ತೇನೆ. ಚಿತ್ರದಲ್ಲಿ ನೀವು ನೋಡಲಿರುವಿರಿ' ಎಂದು ಹೇಳಿಕೊಂಡಿದ್ದರು.
ಇವನ್ನೂ ಓದಿ