ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರದ ಗೀತೆಯೊಂದಕ್ಕೆ 30 ಲಕ್ಷ ಮೌಲ್ಯದ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ. ರಾಕ್‌ಲೈನ್ ಸ್ಟುಡಿಯೋದಲ್ಲಿರುವ ನಿರ್ಮಿಸಲಾಗಿರುವ ಈ ಬೃಂದಾವನದ ಸೃಷ್ಠಿಕರ್ತ ಕಲಾ ನಿರ್ದೇಶಕ ಈಶ್ವರಿ ಕುಮಾರ್.
ಇಂತಹ ಅದ್ದೂರಿ ಬೃಂದಾವನ ಸೆಟ್‌ನಲ್ಲೇ ನಾಯಕ ಮತ್ತು ನಾಯಕಿ ನರ್ತಿಸುವಂತೆ 'ಸಾರಥಿ'ಗೆ ಗೀತೆ ಬರೆದಿದ್ದಾರೆ ವಿ.ನಾಗೇಂದ್ರ ಪ್ರಸಾದ್.
ಹರ್ಷ ಅವರು ನೃತ್ಯ ಸಂಯೋಜಿಸಿದ ಈ ಗೀತೆಗೆ ನಾಯಕ ದರ್ಶನ್ ಹಾಗೂ ನಾಯಕಿ ದೀಪಾ ಸನ್ನಿಧಿ ಹೆಜ್ಜೆ ಹಾಕಿದ್ದಾರೆ. ಕೃಷ್ಣನ ಬೃಂದಾವನವನ್ನು ಹೋಲುವ ಸೆಟ್‌ನ ನಿರ್ಮಾಣಕ್ಕಾಗಿ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಿದೆ ಎಂದಿದ್ದಾರೆ ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್.
ರಾಜ್ ಕಮಲ್ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಸಾರಥಿ' ಚಿತ್ರಕ್ಕೆ ಈ ವರೆಗೂ 95 ದಿನಗಳ ಚಿತ್ರೀಕರಣ ನಡೆದಿದೆ.
ದಿನಕರ ತೂಗುದೀಪ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಚಿಂತನ್ ಸಂಭಾಷಣೆ, ವಿ.ಹರಿಕೃಷ್ಣರ ಸಂಗೀತವಿದೆ.
ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ-ಪಳನಿರಾಜ್ ಸಾಹಸ ಹಾಗೂ ಮದನ್ ಹರಿಣಿ-ಹರ್ಷ ಅವರ ನೃತ್ಯ ನಿರ್ದೇಶನವಿದೆ.
ಚಿತ್ರದ ತಾರಾ ಬಳಗದಲ್ಲಿ ರಂಗಾಯಣ ರಘು, ಲೋಹಿತಾಶ್ವ, ಅಜಯ್, ಬುಲೆಟ್ ಪ್ರಕಾಶ್, ಸೀತಾ, ಶರತ್ ಕುಮಾರ್, ವಿಶ್ವ, ಮುನಿ, ಕೋಟೆ ಪ್ರಭಾಕರ್ ಮುಂತಾದವರಿದ್ದಾರೆ.