'ಮೈಲಾರಿ' ಚಿತ್ರದ ನಂತರ ತನ್ನ ಖ್ಯಾತಿಯನ್ನು ಒಮ್ಮೆಲೆ ಏರಿಸಿಕೊಂಡಿರುವ ಸಂಜನಾ 'ಗಂಡ ಹೆಂಡತಿ'ಯ ಕೆಟ್ಟ ಘಳಿಗೆಯಿಂದ ಹೊರಬಂದಂತಿದೆ. ಉತ್ತಮ ಅವಕಾಶಗಳು ಸಂಜನಾರನ್ನು ಹುಡುಕಿಕೊಂಡು ಬರುತ್ತಿದೆ.
ಕೋಟಿ ನಿರ್ಮಾಪಕನೆಂಬ ಖ್ಯಾತಿಯ ರಾಮು ಅವರ ನಿರ್ಮಾಣದ ಚಿತ್ರ 'ಸಾಗರ'ಕ್ಕೆ ಸಂಜನಾ ಆಯ್ಕೆಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಈ ಚಿತ್ರಕ್ಕೆ ನಾಯಕ. ತ್ರಿಕೋನ ಪ್ರೇಮ ಕತೆಯನ್ನು ಹೊಂದಿರುವ ಈ ಚಿತ್ರಕ್ಕೆ ಪ್ರಥಮ ನಾಯಕಿಯಾಗಿ ಸಂಜನಾ ಆಯ್ಕೆಯಾಗಿದ್ದಾರೆ.
ಇನ್ನಿಬ್ಬರು ನಾಯಕಿಯರ ಆಯ್ಕೆ ಪ್ರಕ್ರಿಯೆ ಸಾಗಿದ್ದು, ಈಗಾಗಲೇ ರಾಧಿಕಾ ಪಂಡಿತ್ ಹಾಗೂ ಕೃತಿ ಕರಬಂಧ ಜತೆ ಮಾತುಕತೆ ನಡೆದಿದ್ದು ಎಲ್ಲವೂ ಪಕ್ಕಾ ಆದಲ್ಲಿ ಈ ಇಬ್ಬರೂ ನಟಿಯರು 'ಸಾಗರ'ದ ಗ್ಲಾಮರ್ ಹೆಚ್ಚಿಸುವುದಂತೂ ಖಾತ್ರಿ.
'ಪೊರ್ಕಿ' ನಂತರ ನಿರ್ದೇಶಕ ಎಂ.ಡಿ. ಶ್ರೀಧರ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಇದು ರಿಮೇಕ್ ಚಿತ್ರವಂತೂ ಅಲ್ಲ ಎಂದು ಒತ್ತಿ ಹೇಳಿರುವ ಶ್ರೀಧರ್, 'ಈ ಚಿತ್ರದಲ್ಲಿ ನಾಯಕನಿಗೆ ಮೂವರು ನಾಯಕಿಯರಿದ್ದು, ತ್ರಿಕೋನ ಪ್ರೇಮ ಕಥೆಯನ್ನು ಹೊಂದಿರುವ ಫ್ಯಾಮಿಲಿ ಡ್ರಾಮಾ ಇದು' ಎಂದಿದ್ದಾರೆ.
'ಚಿತ್ರದುದ್ದಕ್ಕೂ ಹೊಸತನ ಎದ್ದು ಕಾಣುತ್ತದೆ. ಈ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿ ಮೂಡಿ ಬರಲಿದೆ. ಈಗಿನ ಯುವ ಮನಸ್ಸುಗಳ ತಳಮಳ ಚಿತ್ರದ ವೀಶೇಷತೆಗಳಲ್ಲೊಂದು. ಇಲ್ಲಿ ನವಿರಾದ ಪ್ರೀತಿ ಇದೆ. ಆಕ್ಷನ್ ಹಾಗೂ ಸೆಂಟಿಮೆಂಟ್ ಜತೆ ಹಾಸ್ಯವೂ ಸಮ್ಮಿಳಿತವಾಗಿದೆ' ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಶ್ರೀಧರ್.
ಗುರುಕಿರಣ್ ಸಂಗೀತ ನೀಡಲಿರುವ 'ಸಾಗರ'ಕ್ಕೆ ಕೃಷ್ಣ ಕುಮಾರ್ ಛಾಯಾಗ್ರಹಣ. ಅವಿನಾಶ್, ಆಶಿಷ್ ವಿದ್ಯಾರ್ಥಿ, ಸೋನು ಸೂದ್ ಮುಂತಾದವರು ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ. ಬೆಂಗಳೂರು ಸೇರಿದಂತೆ ವಿದೇಶಗಳಲ್ಲಿ 45 ದಿನಗಳ ಚಿತ್ರೀಕರಣ ನಡೆಸುವ ಯೋಜನೆ ನಿರ್ದೇಶಕ ಶ್ರೀಧರ್ ಅವರದು.
ಮಾರ್ಚ್ 21ರಂದು 'ಸಾಗರ'ಕ್ಕೆ ಮುಹೂರ್ತ ನಡೆಯುವ ಸಾಧ್ಯತೆ ಇದೆ.