ಇವರೇನು ಕಲ್ಪನಾನಾ, ಸುಹಾಸಿನಿಯಾ, ಅಲ್ಲಾ ರೇಖಾನಾ....., ಎಂಥೆಂಥಾ ನಾಯಕಿಯರೊಂದಿಗೆ ಕೆಲಸ ಮಾಡಿದ್ದೇನೆ ಇಂಥಹ ದುರಹಂಕಾರಿ ವರ್ತನೆಯನ್ನು ಕಂಡಿರಲಿಲ್ಲ. ನನ್ನ ಸೆಟ್ಟಲ್ಲಿ ಒಮ್ಮೆ ಮೊಬೈಲ್ ಕಿತ್ತು ಎಸೆದು ಬಿಡುತ್ತಿದ್ದೆ, ಆದ್ರೆ ಉಪೇಂದ್ರ ಅವರಿಗೊಸ್ಕರ ಸುಮ್ನೆ ಬಿಟ್ಟೆ.
ಇದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಖಾರಬಾತ್ ಶೈಲಿ!
ಪುನಾಃ ಮುಂದುವರಿದು ಅಲ್ಲಾ ನೀವೇ ಹೇಳಿ ಇವ್ರು (ರಮ್ಯಾ) ಮುಖ್ಯ ಪಾತ್ರದಲ್ಲಿ ನಟಿಸಿದ ಯಾವ ಚಿತ್ರ ಎಷ್ಟು ದಿನ ಓಡಿದೆ. ಇವರಿಗೆ ಬೇಕಾಗಿದೆಲ್ಲ ಒಳ್ಳೊಳ್ಳೆ ಹೀರೋಗಳು. ರಮ್ಯಾನಿಗೆ ಸುದೀಪ್, ಪುನೀತ್, ಉಪೇಂದ್ರನೇ ಬೇಕು. ಅವರ ದಿಸೆಯಿಂದ ಚಿತ್ರ ಹಿಟ್ ಬರುತ್ತೆ. ರಮ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ ಯಾವ ಚಿತ್ರ ಎಷ್ಟು ಓಡಿದೆ ಎಂದು ಪ್ರಶ್ನಿಸಿದ್ದಾರೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.
ರಾಜೇಂದ್ರ ಸಿಂಗ್ ಬಾಬು ಅವರು ನಟಿ ರಮ್ಯಾ ವರ್ತನೆ ವಿರುದ್ಧ ಕಿಡಿಕಾರಿರುವುದು ಇದು ಮೊದಲ ಸಲವೇನಲ್ಲ. ಮತ್ತೆ ರಮ್ಯಾ ರಾದ್ಧಾಂತವೂ ಹೊಸದೇನಲ್ಲ. ಕಾಲ್ಶೀಟ್ ಕೊಟ್ಟು ನಂತರ ಹಿಂಪಡೆಯುವುದು. ಸಂಭಾವನೆ ತೆಗೆದುಕೊಂಡು ಚಿತ್ರೀಕರಣಕ್ಕೆ ಬರದಿರುವುದು. ಬಂದರೂ ಮೊಬೈಲ್ನಲ್ಲೇ ಮಾತನಾಡುತ್ತಿರುವುದು. ಹೀಗೇ ಒಂದಲ್ಲಾ ಒಂದು ಕಾರಣಕ್ಕೆ ಸಿಂಗ್, ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಆದರೆ ಈಗ ರಾಜೇಂದ್ರ ಸಿಂಗ್ ಬಾಬು ಅಸಮಾಧಾನಗೊಂಡಿರುವುದು 'ದಂಡಂ ದಶಗುಣಂ' ಚಿತ್ರಕ್ಕೆ ಸಂಬಂಧಿಸಿದ್ದು. ಸೋಮವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಬರದೆ ಮನೆಗೆ ಪೀಠೋಪಕರಣ ಕರೀದಿಸಲು ಹೋಗಿ ನಿರ್ಮಾಪಕ ಎ.ಗಣೇಶ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಈ ಸಂಬಂಧ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯಲ್ಲಿ ತನ್ನ ಅಸಮಾಧಾನ ತೋಡಿಕೊಂಡರು. ಹಿರಿಯ ನಟ-ನಟಿಯರೆಲ್ಲರೂ ನಿರ್ಮಾಪಕರ, ನಿರ್ದೇಶಕರೊಂದಿಗೆ ಚಿತ್ರದ ಪ್ರಚಾರಕ್ಕೆ ಸಹಕರಿಸುತ್ತಾರೆ. ಇತ್ತೀಚೆಗಷ್ಟೆ ತಮಿಳಿನ 'ವೇಟ್ಟೈಕಾರನ್' ಚಿತ್ರದ ಬಿಡುಗಡೆ ಸಮಾರಂಭಕ್ಕೆ ಹಣದ ಕೊರತೆಯಿದ್ದಾಗ, ನಾಯಕ ನಟ ವಿಜಯ್ ತನ್ನ ಮನೆಯಿಂದ ಹತ್ತು ಲಕ್ಷ ರೂಪಾಯಿ ಕೊಟ್ಟು ಸಹಕರಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದರು.