'ದಂಡಂ ದಶಗುಣಂ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗದೆ, ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಜಂಭದ ಹುಡುಗಿ ನಟಿ ರಮ್ಯಾ ವಿರುದ್ಧ ಈಗ ಚಲನ ಚಿತ್ರ ನಿರ್ಮಾಪಕರ ಸಂಘ ತಿರುಗಿ ಬಿದ್ದಿದೆ.
ನಟಿ ರಮ್ಯಾ ಪೊಗರು ಸ್ವಲ್ಪ ಕಡಿಮೆ ಮಾಡಲು ಇಂದು ಸಭೆ ಸೇರಿದ ನಿರ್ಮಾಪಕರ ಸಂಘ, ಮುಂದಿನ ನಲವತ್ತೆಂಟು ಗಂಟೆಯೊಳಗೆ 'ದಂಡಂ ದಶಗುಣಂ' ಚಿತ್ರದ ಪ್ರಚಾರಕ್ಕೆ ಬರುವುದಾಗಿ ರಮ್ಯಾ ಬಹಿರಂಗವಾಗಿ ಹೇಳಿಕೆ ನೀಡಬೇಕೆಂಬ ಒಮ್ಮತ ತೀರ್ಮಾನಕ್ಕೆ ಬಂದಿದ್ದಾರೆ.
ಆದರೆ ಇದಕ್ಕೆ ರಮ್ಯಾ ಎಷ್ಟು ಸೊಪ್ಪು ಹಾಕುತ್ತಾರೆ ಎಂಬುದು ಕೌತುಕ ಸ್ವಾರಸ್ಯ.
ಮಂಗಳವಾರ ಸುದ್ಧಿವಾಹಿನಿಯೊಂದರಲ್ಲಿ ನಿರ್ಮಾಪಕರು ನಿರ್ದೇಶಕರು ಎಲ್ಲರೂ ರಮ್ಯಾ ಕೈಕೊಟ್ಟ ವಿಚಾರ ಮತ್ತು ಅವರ ಅತಿರೇಕದ ಅಸಡ್ಡೆಯನ್ನು ಚರ್ಚೆಮಾಡುತ್ತಾ, ದೂರವಾಣಿ ಕರೆಗಳಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ನಟಿ ರಮ್ಯಾ ಅವರ ಲೋಪವನ್ನೇ ವಿವರಿಸುತ್ತಿದ್ದರು.