'ಸತ್ಯಾನಂದ' ವಿರುದ್ಧ ನಿತ್ಯಾನಂದ ಸ್ವಾಮಿ ದಾಳಿ ತೀವ್ರಗೊಂಡಿದೆ. 'ಸತ್ಯಾನಂದ'ನ ಚಿತ್ರೀಕರಣ ಈಗಾಗಲೇ ಬಿರುಸಿನಿಂದ ಸಾಗಿದ್ದು, ಚಿತ್ರೀಕರಣಕ್ಕೆ ತಡೆಹೇರಿ ನಿರ್ದೇಶಕ ಮದನ್ ಪಟೇಲ್ ಅವರಿಗೆ ಚೆನ್ನೈ ನ್ಯಾಯಾಲಯದಿಂದ ನೋಟೀಸು ಜಾರಿಯಾಗಿದೆ.
ಹೈದರಾಬಾದ್ ಮೂಲದ ಕೃಷ್ಣ ಕುಮಾರ್ ಎಂಬ ವಕೀಲ ನಿತ್ಯಾನಂದ ಸ್ವಾಮಿ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಮಾರ್ಚ್ 6ರಂದು ಸೆಟ್ಟೇರಿದ್ದ 'ಸತ್ಯಾನಂದ' ಚಿತ್ರಕ್ಕೆ ತಡೆಹೇರಿ ಮಾರ್ಚ್ 8ರಂದು ನೋಟೀಸು ಜಾರಿಯಾಗಿತ್ತು.
ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದ್ದ ಕಾರಣದಿಂದ ಚಿತ್ರೀಕರಣಕ್ಕೆ ರಜೆ ಘೋಷಿಸಲಾಗಿತ್ತು. ಆದ್ದರಿಂದ ಈ ವಿಚಾರ ತಕ್ಷಣಕ್ಕೆ ಬೆಳಕಿಗೆ ಬಂದಿರಲಿಲ್ಲ. ಈ ಹಿಂದೆಯೇ ನಿತ್ಯಾನಂದ ಸ್ವಾಮಿ ಲೈಂಗಿಕ ಪ್ರಕರಣ ಕುರಿತು ಚಲನ ಚಿತ್ರ ಮಾಡುವುದಾಗಿ ನಿರ್ಮಾಪಕ ಮದನ್ ಪಟೇಲ್ ಹೇಳಿಕೆ ಕೊಟ್ಟಿದ್ದ ವೇಳೆ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಯಾವುದೇ ಬೆದರಿಕೆಗೂ ಜಗ್ಗಲ್ಲ....
ನಿತ್ಯಾನಂದ ಸ್ವಾಮಿ ಲೈಂಗಿಕ ಪ್ರಕರಣ ಕುರಿತು ಚಿತ್ರ ನಿರ್ಮಾಣ ಮಾಡಬಾರದು ಎಂದು ಈಗಾಗಲೇ ಹಲವಾರು ಬಾರಿ ಬೆದರಿಕೆ ಕರೆಗಳು ಬಂದಿದ್ದವು. ಹಾಗೂ ನನ್ನ ಆಪ್ತ ವಲಯದಿಂದಲೂ ಮನವೊಲಿಕಾ ಪ್ರಯತ್ನ ನಡೆದಿತ್ತು. ಈಗ ಕಾನೂನು ಸಮರ ಸಾರಿದ್ದಾರೆ. ಆದರೆ ಇಂಥಾ ಯಾವುದೇ ಬೆದರಿಕೆಗೆ, ಕಾನೂನು ಹೋರಾಟಕ್ಕೆ ಜಗ್ಗದೆ, ಪ್ರತಿಯಾಗಿ ತಾನೂ ಕಾನೂನು ಹೋರಾಟ ಮಾಡುವುದಾಗಿ ನಿರ್ದೇಶಕ ಮದನ್ ಪಟೇಲ್ ಹೇಳಿದ್ದಾರೆ.
ನೋಟೀಸಿನಲ್ಲೇನಿದೆ.....
ಜನರ ನಂಬಿಕೆಯ ವಿರುದ್ಧ ಅಸಬ್ಯವಾಗಿ ಚಲನ ಚಿತ್ರ ಮಾಡುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅಪರಾಧ. ಹಾಗೂ ಲಕ್ಷಾಂತಕ ಭಕ್ತರನ್ನು, ಅನುಯಾಯಿಗಳನ್ನು ಹೊಂದಿರುವ ಒಬ್ಬ ಸ್ವಾಮೀಜಿಯ ಪ್ರಕರಣ ಕುರಿತು ವಿಚಾರಣೆ ಇನ್ನೂ ಪೂರ್ಣಗೊಳ್ಳದೆ ಅವರ ಕುರಿತು ಚಿತ್ರ ನಿರ್ಮಿಸುವುದು ಅಪರಾಧವಾಗುತ್ತದೆ. ಹಾಗೂ ಈ ಅಪರಾಧ ಭಾರತೀಯ ದಂಢ ಸಂಹಿತೆಯ ಮಾನನಷ್ಟ ಮೊಕದ್ದಮೆಯ ಪರಿದಿಯೊಳಗೆ ಬರುತ್ತದೆ. ಆದ್ದರಿಂದ ಅಂತಹ ಸಾರ್ವಜನಿಕ ವ್ಯಕ್ತಿಯ ಬಗ್ಗೆ ನಿರ್ಮಾಪಕ, ನಿರ್ದೇಶಕ, ನಟ ಮದನ್ ಪಟೇಲ್ ಅವರು ಚಿತ್ರ ನಿರ್ಮಿಸುತ್ತಿರುವುದರಿಂದ ಅವರಿಂದ ಸ್ಪಷ್ಟೀಕರಣ ಕೇಳಲಾಗಿದೆ.
ಇಂಥಹ ಚಿತ್ರ ಇದೇ ಮೊದಲಲ್ಲ......
ಈ ಹಿಂದೆಯೂ ಬೇರೆ-ಬೇರೆ ಧರ್ಮದ ಜನರ ನಂಬಿಕೆಗೆ ಸಂಬಂಧಿಸಿದಂತೆ ಹಲವಾರು ಚಿತ್ರಗಳು ಬಂದು ಹೋಗಿವೆ. ದೈವಿಕತೆಯ ವಿಡಂಬಣೆ ಕುರಿತ ಕೆಲವೊಂದು ಕಾದಂಬರಿಯಾದರಿಸಿ ಚಿತ್ರ ನಿರ್ಮಾಣವಾಗಿದೆ. ಆದರೆ ನಂಬಿಕೆಯ ಹೆಸರಿನಲ್ಲಿ ಜನರು ಮೋಸಹೋಗಬಾರದು, ಜನರನ್ನೂ ಯಾರೂ ಮೋಸಮಾಡಬಾರದು ಎಂಬ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಯಾವುದೇ ಸ್ವಾಮಿಯ ಅಥವಾ ಧರ್ಮದ ಅವಮಾನ ಮಾಡುವ ಉದ್ಧೇಶ ಇಲ್ಲ. ಹಾಗೂ ಸ್ವಾಮಿ ನಿತ್ಯಾನಂದ ಅವರು ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಇಂಥಹ ಸಮರದ ಔಚಿತ್ಯವೇನಿದೆ. ಚಿತ್ರ ಬಿಡುಗಡೆಯಾದ ನಂತರ ಅದನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಿ ಎಂದಿದ್ದಾರೆ ಮದನ್ ಪಟೇಲ್.
ಸ್ವಾಮಿ ನಿತ್ಯಾನಂದ ಲೈಂಗಿಕ ಪ್ರಕರಣ ಆದರಿಸಿ ತೆಗೆಯಲಾಗುತ್ತಿರುವ 'ಸತ್ಯಾನಂದ' ಚಿತ್ರದಲ್ಲಿ ನಟ ರವಿ ಚೇತನ್ ನಿತ್ಯಾನಂದನ ಪಾತ್ರ ನಿರ್ವಹಿಸುತ್ತಿದ್ದಾರೆ. ನಮಿತಾ ಮತ್ತು ಚಾರ್ಮಿ ನಾಯಕಿಯರ ಪಾತ್ರದಲ್ಲಿದ್ದಾರೆ.