ದಿಗಂತ್, ರೇಖಾ ಅಭಿನಯದ 'ಜಾಲಿ ಬಾಯ್' ಬಿಡುಗಡೆಯಾಗುತ್ತಿದ್ದಂತೆ ನಿರ್ಮಾಪಕ ಕೆ.ಮಂಜು ಮತ್ತೆರಡು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಆ ಪೈಕಿ ಒಂದು ಚಿತ್ರದಲ್ಲಿ ಗಣೇಶ್ ಮತ್ತೊಂದು ಚಿತ್ರದಲ್ಲಿ ವಿಜಯ್ ನಾಯಕರಾಗುವುದು ನಿಶ್ಚಿತ. ಅವು ಅನುಕ್ರಮವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಸೆಟ್ಟೇರಲಿವೆ.
ಇದರಲ್ಲಿ ಗಣೇಶ್ ನಟಿಸುತ್ತಿರುವ ತಮಿಳಿನ 'ಮೈನಾ' ಚಿತ್ರದ ರಿಮೇಕ್ ಬಗ್ಗೆ ಮಂಜು ಹೆಚ್ಚು ಉತ್ಸುಕರಾಗಿದ್ದಾರೆ. ಈ ಮೊದಲು ಶತ ದಿನಗಳ ಪ್ರದರ್ಶನ ಕಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೊನೆಯ ಚಿತ್ರ 'ಅರಮನೆ' ಯನ್ನೂ ಕೆ.ಮಂಜು ಅವರೇ ನಿರ್ಮಿಸಿದ್ದರು.
'ಸ್ಕ್ತ್ರಿಪ್ಟ್ ರೆಡಿಯಾಗಿದೆ. ಅದು ಗಣೇಶ್‌ಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಚೆನ್ನೈನ ಪ್ರಭು ಸೋಲೋಮನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ' ಎಂದು ಮಂಜು ತಿಳಿಸಿದ್ದಾರೆ. ತಮಿಳಿನ 'ಮೈನಾ' ಚಿತ್ರವನ್ನೂ ಪ್ರಭು ಸೋಲೋಮನ್ ಅವರೇ ನಿರ್ದೇಶಿಸಿದ್ದರು.
ವಿಜಯ್ ನಾಯಕನಾಗಿ ಅಭಿನಯಿಸುವ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.
ಚಿತ್ರಕಥೆಯಲ್ಲಿ ಹೆಚ್ಚು ನಂಬಿಕೆಯಿಟ್ಟಿರುವ ಮಂಜು, 'ಚೆನ್ನಾಗಿರುವ ಕಥೆ ಸಿಕ್ಕರೆ ಮಾತ್ರ ಸಿನಿಮಾ ಮಾಡುತ್ತೇನೆ. ಒಬ್ಬ ನಿರ್ಮಾಪಕನಾಗಿ ಕಥೆ ನನಗೇ ಇಷ್ಟವಾಗದಿದ್ದರೆ ಜನರಿಗೆ ಮೆಚ್ಚುಗೆಯಾಗುತ್ತದೆ ಎಂದು ನೀರೀಕ್ಷಿಸುವುದಾದರೂ ಹೇಗೆ' ಎಂದು ಪ್ರಶ್ನೆ ಹಾಕಿದ್ದಾರೆ.