ನಟಿ ಪ್ರಜ್ಞಾ ಕನ್ನಡ ಚಿತ್ರವೊಂದರ ಐಟಮ್ ಸಾಂಗ್ನಲ್ಲಿ ಕಾಣಿಸಿಕೊಂಡಿರುವುದು ಗಾಂಧಿನಗರದಲ್ಲಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಸಾಧು ಕೋಕಿಲ ನಿರ್ಮಾಣದ 'ನೈಂಟಿ' ಚಿತ್ರ. ಶೀರ್ಷಿಕಯೇ ಸೂಚಿಸುವಂತೆ ಇದೊಂದು ಹಾಸ್ಯ ಪ್ರಧಾನ ಚಿತ್ರ.
ಕನ್ನಡದ ಬಹುತೇಕ ಹಾಸ್ಯ ನಟರೆಲ್ಲಾ ಸೇರಿಕೊಂಡು ಇಲ್ಲಿ 'ನೈಂಟಿ-ನೈಂಟಿ' ಹೊಡೆಯುತ್ತಾರೆ. ಚಿತ್ರಕ್ಕೆ ನಾಯಕಿ ಎಂದು ಯಾರೂ ಇಲ್ಲ. ಶಕೀಲಾ ಮುಖ್ಯ ಪಾತ್ರದಲ್ಲಿರುವುದರಿಂದ ಅವರನ್ನೇ ನಾಯಕಿ ಎಂದು ಪರಿಗಣಿಸಬಹುದೇನೋ.
ಪ್ರಜ್ಞಾ ಕಾಣಿಸಿಕೊಂಡಿರುವ ಹಾಡು ಡ್ಯುಯೆಟ್ ಅಲ್ಲ. ಪ್ಯಾಥೋ ಸಾಂಗ್ ಕೂಡಾ ಅಲ್ಲ. ಬದಲಾಗಿ ಕುಡುಕರು ನಶೆ ಏರಿಸಿಕೊಂಡು ತಮ್ಮ ಕುಡಿತದ ದೇವತೆಯನ್ನು ನೆನೆಸಿಕೊಂಡಾಗ ಶುರುವಾಗುವ ಹಾಡು.
ಇತ್ತೀಚೆಗೆ ರಾಕ್ಲೈನ್ ಸ್ಟುಡಿಯೋದಲ್ಲಿ ಹಾಡಿನ ಚಿತ್ರೀಕರಣ ಮುಗಿದಿದೆ. ಒಂದಷ್ಟು ಮಂದಿ ತೂರಾಡುತ್ತಿದ್ದರೆ ಪ್ರಜ್ಞಾ ಮಾತ್ರ ಬಿಂದಾಸ್ ಡ್ರೆಸ್ನಲ್ಲಿ ಹೈಕಳ ಜತೆ ಮೈ ಕುಲುಕಿಸುತ್ತಾ ಹೆಜ್ಜೆ ಹಾಕಿದರು. ಗಾಂಧಿನಗರ ಭಾಷೆಯಲ್ಲಿ ಸಾಮಾನ್ಯವಾಗಿ ಇಂಥ ಹಾಡಿಗೆ 'ಐಟಂ ಸಾಂಗ್' ಎಂದೆನ್ನುತ್ತಾರೆ. ಆದರೆ ಸಾಧು ಕೋಕಿಲ ಮತ್ತು ಪ್ರಜ್ಞಾ ಇದನ್ನು ಐಟಮ್ ಸಾಂಗ್ ಎನ್ನಲು ಬಿಲ್ಕುಲ್ ತಯಾರಿಲ್ಲ.
ಬಾಲಿವುಡ್ನಲ್ಲಿ ಸ್ಟಾರ್ ನಟಿಯರು ಒಂದೊಂದು 'ಐಟಂ' ಹಾಡಿನಲ್ಲಿ ಕಾಣಿಸಿಕೊಳ್ಳುವ ಟ್ರೆಂಡ್ ಶುರುವಾಗಿದ್ದು ಅದೀಗ ಸ್ಯಾಂಡಲ್ವುಡ್ಗೂ ಎಂಟ್ರಿ ಪಡೆದಂತಾಗಿದೆ.
'ನೈಂಟಿ'ಯಲ್ಲಿ ಪ್ರಜ್ಞಾ ಈಚಲಮ್ಮಾ ದೇವಿ (ಈಚಲ ಮರದ ಒಡತಿ) ಯಾಗಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದು 'ಇದು ಚಿತ್ರದ ಪ್ರಮುಖ ಹಾಡು' ಎಂದಿದ್ದಾರೆ ನಿರ್ಮಾಪಕ ಸಾಧು ಕೋಕಿಲ.