ನಟಿ ರಮ್ಯಾ ಮತ್ತು ನಿರ್ಮಾಪಕ ಎ.ಗಣೇಶ್ ನಡುವಣ 'ದಂಡಂ ದಶಗುಣಂ' ವಿವಾದಕ್ಕೆ ತೆರೆ ಬಿತ್ತೆನ್ನುವಷ್ಟರಲ್ಲಿಯೇ ಈ ವಿವಾದ ಬೇರೆಯೇ ತಿರುವು ಪಡೆದುಕೊಂಡಿದೆ. ಈಗ ಚಿತ್ರ ಕಲಾವಿದರ ಸಂಘ ಮತ್ತು ನಿರ್ಮಾಪಕರ ಸಂಘ ನಡುವೆ ಜಟಾಪಟಿ ಏರ್ಪಟ್ಟಿದೆ. ತಡರಾತ್ರಿಯ ಬೆಳವಣಿಗೆಯಲ್ಲಿ ನಟಿ ರಮ್ಯಾ ಅವರಿಗೆ ನಿರ್ಮಾಪಕರ ಸಂಘ ಒಂದು ವರ್ಷ ಬಹಿಷ್ಕಾರ ಹಾಕಿದೆ.
ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಗೆ ಕಲಾವಿದರ ಸಂಘ ಹಾಜರಾಗಿರಲಿಲ್ಲ. ಚಿತ್ರರಂಗದ ಇತರ ಎಲ್ಲಾ ಕ್ಷೇತ್ರದಿಂದ (ಛಾಯಾಗ್ರಾಹಕರ ಸಂಘ, ನಿರ್ದೇಶಕರ ಸಂಘ ಇತ್ಯಾದಿ) ಹಲವರು ಹಾಜರಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಈ ನಿರ್ಣಯಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ಈ ಹಿಂದೆಯೇ ನಾನು ಈ ತೀರ್ಮಾನವನ್ನು ತೆಗೆದುಕೊಂಡಿದ್ದೆ. ನಿರ್ಮಾಪಕರ ಈ ಕ್ರಮ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.
ಹಿಂದಿನ ಬೆಳವಣಿಗೆ..... 'ನಿರ್ಮಾಪಕ ಗಣೇಶ್ ಅವರು ನಟಿ ರಮ್ಯಾಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಅವರು ರಮ್ಯಾ ಅವರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಹಾಗೂ ರಮ್ಯಾ ಅವರಿಗೆ ಗಣೇಶ್ ಕೊಡಬೇಕಾದ ಬಾಕಿ ಸಾಲದ ಹಣ 3.70 ಲಕ್ಷ ರೂಪಾಯಿಗಳನ್ನು ಎರಡು ದಿನಗಳೊಳಗಾಗಿ ಪಾವತಿಸಬೇಕು. ಮಾತ್ರವಲ್ಲದೆ ಗಣೇಶ್ ಅವರ ಮುಂದಿನ ಚಿತ್ರದಲ್ಲಿ ಯಾವುದೇ ಕಲಾವಿದರೂ ನಟಿಸಬಾರದು' ಎಂದು ಅಂಬರೀಷ್ ಅಧ್ಯಕ್ಷತೆಯಲ್ಲಿ ಕಲಾವಿದರ ಸಂಘ ತೀರ್ಮಾನಿಸಿತ್ತು.
PR
ಕಲಾವಿದರ ಸಂಘದ ಈ ನಿರ್ಣಯಕ್ಕೆ ಅಸಮಾಧಾನಗೊಂಡ ಚಲನ ಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದ ಪರವಾಗಿ ನಿಂತಿದೆ. ಹಾಗೂ 'ಯಾವ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಸ್ಪಷ್ಟನೆಯನ್ನೂ ಕೇಳಲಾಗಿತ್ತು.
ಬಸಂತ್ ಸುಪ್ರೀಂ... 'ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿಯೂ ಆಗಿರುವ ನಿರ್ಮಾಪಕ ಎ. ಗಣೇಶ್ ಯಾವ ತಪ್ಪನ್ನೂ ಮಾಡಿಲ್ಲ. ಹಾಗಿದ್ದರೂ ಅವರ ಮುಂದಿನ ಚಿತ್ರಗಳಲ್ಲಿ ಕಲಾವಿದರಾರೂ ನಟಿಸಬಾರದೆಂದು ತೀರ್ಮಾನ ಕೈಗೊಳ್ಳಲು ಅಂಬರೀಷ್‌ಗೆ ಅಧಿಕಾರವಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯೇ ಸುಪ್ರೀಂ ಆಗಿದ್ದು ಅದರ ನಿರ್ಧಾರವೇ ಅಂತಿಮ' ಎಂದು ಮಂಡಳಿಯ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅವರು ನಿರ್ಮಾಪಕರ ಸಭೆಯಲ್ಲಿ ಹೇಳಿಕೆ ನೀಡಿದ್ದರು.
ತದನಂತರದ ಬೆಳವಣಿಗೆಯಲ್ಲಿ ನಟಿ ರಮ್ಯಾ ಮತ್ತು ಪೂಜಾಗಾಂಧಿ ಅವರ ವರ್ತನೆಯನ್ನು ಖಂಡಿಸಿ ಅವರನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕಾರ ಹಾಕಲು ಕೆಎಫ್‌ಸಿಸಿ ತೀರ್ಮಾನಿಸಿದೆ ಎಂಬ ಮಾತುಗಳು ಕೇಳಿಬಂದಿತ್ತು. ಹಾಗೂ ಈ ನಿರ್ಣಯವನ್ನು ಕೆಎಫ್‌ಸಿಸಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅವರೇ ತೆಗೆದುಕೊಂಡಿದ್ದಾರೆ. ಕೆಎಫ್‌ಸಿಸಿ ತೀರ್ಮಾನವೇ ಸುಪ್ರೀಂ ಎನ್ನಲಾಗಿತ್ತು.
ಅಂಬಿ ಗುಡುಗು.... ಇಂತಹ ಹೇಳಿಕೆಗಳಿಗೆ ಕೆಂಗಣ್ಣು ಭೀರಿದ ರೆಬಲ್‌ಸ್ಟಾರ್ ಅಂಬರೀಷ್, ಕನ್ನಡ ಚಿತ್ರರಂಗ ಎಂಬುದು ಒಂದು ಕುಟುಂಬದ ಹಾಗೆ ಇಲ್ಲಿ ಸುಪ್ರೀಂ-ಗಿಪ್ರೀಂ ಯಾವುದೂ ಇಲ್ಲಾ. ಈ ಹಿಂದೆ ಚಿತ್ರರಂಗದಲ್ಲಿ ಉಲ್ಬಣಗೊಂಡಿದ್ದ ಹಲವಾರು ಸಮಸ್ಯೆಗಳನ್ನು ನಾನು ಬಗೆಹರಿಸಿದ್ದೇನೆ. ಈ ವಿವಾದವನ್ನು ನಾನು ಬಗೆಹರಿಸುತ್ತೇನೆ.
ಈ ಹಿಂದೆ ಕೆಎಫ್‌ಸಿಸಿ ಅಧ್ಯಕ್ಷ ಸ್ಥಾನದಿಂದ ಬಸಂತ್ ಕುಮಾರ್ ಪಾಟೀಲ್ ಅವರು ಕೆಳಗಿಳಿಯಬೇಕೆಂದು ಪ್ರತಿಭಟನೆಗಳು ನಡೆದಿತ್ತು. ಆ ಸಮಸ್ಯೆಯನ್ನೂ ನಾನೇ ಬಗೆಹರಿಸಿದ್ದು ಎಂದು ಗುಡುಗಿದ್ದರು ಅಂಬಿ.
ಅಂಬಿ X ಶಿವಣ್ಣ..? ನಿರ್ಮಾಪಕರು ಮತ್ತು ವಾಣಿಜ್ಯ ಮಂಡಳಿಯ ವಿರುದ್ಧ ಅಂಬಿ ತಿರುಗಿ ಬಿದ್ದು ವಿವಾದ ಒಮ್ಮೆಲೆ ಬಿಸಿ ಏರುತ್ತಿದ್ದಂತೆ ಇತ್ತ ನಿರ್ಮಾಪಕರು ಶಿವಣ್ಣನನ್ನು ಸಂಪರ್ಕಿಸಿ ವಿವಾದ ಇತ್ಯರ್ಥಕ್ಕೆ ಬೇಡಿಕೆ ಇಟ್ಟಿದ್ದರು.
ಒಂದೆಡೆ ರಮ್ಯಾ ಪರವಾಗಿ ಅಂಬರೀಷ್ ಮತ್ತು ಕಲಾವಿದರ ಸಂಘ ಇದ್ದರೆ, ಮತ್ತೊಂದೆಡೆ ನಿರ್ಮಾಪಕರ ಪರವಾಗಿ ಶಿವಣ್ಣ ಇದ್ದಾರೆ ಎಂಬಂತ ಮಾತುಗಳು ಕೇಳಿಬಂದಿದ್ದವು.
ಸಭೆಗೆ ಶಿವಣ್ಣ ಗೈರು..... ಸುದ್ಧಿವಾಹಿನಿಯೊಂದರ ಕರೆಗೆ ಸ್ಪಂದಿಸಿದ ಶಿವಣ್ಣ, ತಾನು 'ಜೋಗಯ್ಯ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದು, ಮಂಗಳವಾರ ಸಂಜೆ ನಡೆಯಲಿರುವ ಸಭೆಗೆ ಹಾಜರಾಗಲು ಸಾಧ್ಯವಾಗದು. ಅಂಬರೀಷ್ ಅವರೇ ವಿವಾದವನ್ನು ಬಗೆಹರಿಸುತ್ತಾರೆ. ಅದರ ಬಗ್ಗೆ ಎರಡು ಮಾತಿಲ್ಲ. ಬಹಿರಂಗ ಹೇಳಿಕೆ ನೀಡಲು ಹೋಗಿ ಈ ತಪ್ಪು ನಡೆದಿದೆಯಷ್ಟೆ. ಹೀಗಾಗಬಾರದಿತ್ತು ಎಂದು ವಿಷಾಧ ವ್ಯಕ್ತಪಡಿಸಿದರು.
ಅಂಬಿ ಮನೆಗೆ ನಿರ್ಮಾಪಕರ ದೌಡು..... ಒಮ್ಮೆಲೆ ಬೇರೆ-ಬೇರೆ ರೀತಿಯಲ್ಲಿ ತಿರುವು ಪಡೆದುಕೊಂಡ ಈ ವಿವಾದವನ್ನು ಶಮನಗೊಳಿಸಲು ಮಂಗಳವಾರ ಕೆಲವು ನಿರ್ಮಾಪಕರು ಅಂಬರೀಷ್ ಮನೆಗೆ ಹೋಗಿದ್ದರು. ಹಾಗೂ ಸಂಜೆ 4.30ಕ್ಕೆ ನಡೆಯಲಿರುವ ಸಭೆಗೆ ಪೂರ್ವಭಾವಿ ಸಿದ್ಧತೆಯನ್ನು ತೆಗೆದುಕೊಳ್ಳಲು ಈ ಭೇಟಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ಡಾ. ರಾಜ್‌ಕುಮಾರ್‌ಗೇ ಜೈ!.. ವಿವಾದ ಸುಖಾಂತ್ಯಕ್ಕೆ ಆತೊರೆಯುತ್ತಿರುವಂತೆ ಕಂಡ ನಿರ್ಮಾಪಕರ ಸಂಘ ಕಂಠೀರವ ಮೈದಾನದಲ್ಲಿ ಮೌನ ಪ್ರತಿಭಟನೆ ನಡೆಸಲು ನಿರ್ದರಿಸಿತ್ತು. ನಂತರ ಒಮ್ಮೆಲೆ ತಮ್ಮ ನಿಲುವು ನಿರ್ಧಾರಗಳನ್ನು ಬದಲಿಸಿ ಫಿಲಂ ಛೇಂಬರ್‌ನಲ್ಲಿದ್ದ ಡಾ. ರಾಜ್ ಪ್ರತಿಮೆಗೆ ಹಾರ ಹಾಕಿ ಜಯಘೋಷ ಕೂಗಿದರು.
ಹಣ ವಾಪಸ್ ಕೊಟ್ಟರೂ ಬೇಡವೆಂದರು...? ಈ ನಡುವೆ ನಿರ್ಮಾಪಕ ಎ.ಗಣೇಶ್ ಅವರು ನಟಿ ರಮ್ಯಾ ಅವರಿಗೆ ಕೊಡಬೇಕಿದ್ದ ಸಾಲದ ಹಣ 4ಲಕ್ಷ ವನ್ನು, ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ನಿರ್ಮಾಪಕ ಮುನಿರತ್ನ ಅವರ ಮದ್ಯಸ್ಥಿಕೆಯಲ್ಲಿ ಮಂಗಳವಾರ ರಮ್ಯಾ ಅವರಿಗೆ ಕೊಟ್ಟಾಗ, 'ಇಲ್ಲಾ ಈ ಹಣವನ್ನು ಎ.ಗಣೇಶ್ ಅವರೇ ತಂದುಕೊಡಲಿ' ಎಂದು ಪಟ್ಟು ಹಿಡಿದು ಹಣ ಸ್ವೀಕರಿಸಲು ನಿರಾಕರಿಸಿದರು ಎಂದು ಎ.ಗಣೇಶ್ ಆಪ್ತವಲಯಗಳು ತಿಳಿಸಿವೆ.
ಎಲ್ಲಾ ಸುಳ್ಳು!, ಹಣ ಕೊಟ್ಟೇ ಇಲ್ಲಾ..ರಮ್ಯಾ ಸ್ಪಷ್ಟನೆ! ಹೌದಾ, ಕೊಟ್ಟ ಹಣವನ್ನು ನಿರಾಕರಿಸಿದ್ದೀರಾ..? ಅಂದದಕ್ಕೆ, ಹಣ ಕೊಡಲು ಯಾರೂ ಬಂದಿಲ್ಲ. ಇದೆಲ್ಲ ಸುಳ್ಳು ಎಂದಿದ್ದಾರೆ ರಮ್ಯಾ. ಮುಂದುವರಿದು ಹಣ ಪಡೆದುಕೊಂಡವರು ವಾಪಾಸು ಕೊಡಲಿ. ಅವರೇ ಅಲ್ವಾ ವಾಪಾಸು ಕೊಡಬೇಕಾಗಿದ್ದು..? ಎಂದು ಪ್ರಶ್ನಿಸಿದ್ದರು.
ಈಗಾಗಲೇ ಈ ವಿವಾದದ ಕುರಿತು ನನಗೆ ಹಿಂಸೆ ಅನಿಸಿದೆ. ನಿರ್ಮಾಪಕ ಎ.ಗಣೇಶ್ ಅವರ ವರ್ತನೆ ಒಂಚೂರು ನನಗೆ ಸರಿ ಕಾಣಿಸಿಲ್ಲ. ನಾನವರಿಗೆ ಸಹಾಯ ಮಾಡಿದ್ದೆ ಅದಕ್ಕೆ ಪ್ರತಿಯಾಗಿ ಇಷ್ಟು ಕೆಟ್ಟದಾಗಿ ನಡೆದುಕೊಳ್ಳುವುದಾ..? ಎಂದರು.
ಒಂಬತ್ತು ಲಕ್ಷ ಕೊಡಬೇಕು....? ನನಗೂ ರಮ್ಯಾ ಅವರಿಗೂ ಹಣದ ವ್ಯವಹಾರವೇ ಇಲ್ಲಾ ಎಂದಿದ್ದ ಎ.ಗಣೇಶ್, ಮತ್ತೊಮ್ಮೆ 3.70ಲಕ್ಷ ಕೊಡಬೇಕಿದೆ ಎಂದಿದ್ದಾರೆ. ಇನ್ನೊಮ್ಮೆ ನಾಲ್ಕು ಲಕ್ಷ ವಾಪಾಸು ಕೊಟ್ಟರೂ ನಿರಾಕರಿಸಿದ್ದಾರೆ ಎಂದಿದ್ದಾರೆ. ಇದೆಲ್ಲಾ ಏನು...? ನನಗೇನು ಅರ್ಥ ಆಗ್ತಾ ಇಲ್ಲ.
ನಾನು ಸಾಲಕೊಟ್ಟದ್ದು ಹತ್ತು ಲಕ್ಷ. ಅದರಲ್ಲಿ ಒಂದು ಲಕ್ಷ ವಾಪಾಸು ಕೊಟ್ಟಿದ್ದಾರೆ. ಇನ್ನು ಕೊಡಬೇಕಿರುವುದು ಒಂಬತ್ತು ಲಕ್ಷ. ಅದನ್ನವರು ಕಲಾವಿದರ ಸಂಘಕ್ಕೆ ಕೊಡಲಿ. ನಂತರ ಅವರು ನನಗೆ ಕೊಡುತ್ತಾರೆ. ಈ ಪೊಳ್ಳು ವ್ಯವಹಾರಗಳೇ ಬೇಡ. ಇದರಿಂದ ಬೇಸತ್ತಿದ್ದೇನೆ ಎಂದಿದ್ದಾರೆ ರಮ್ಯಾ.
ಕೆಳಮಟ್ಟದ ವರ್ತನೆ.... ಇದೆಲ್ಲ ಕೆಳಮಟ್ಟದ ಕಳಪೆ ವರ್ತನೆ. ನಿರ್ಮಾಪಕ ಎ.ಗಣೇಶ್ ಅವರು ಮಾದ್ಯಮದ ಮುಂದೆ ಹೋಗಬಾರದಿತ್ತು. ನಮ್ಮ ಚಿತ್ರರಂಗವನ್ನು ನೋಡಿ ಬೇರೆಯವರು ಏನಂದುಕೊಳ್ಳುತ್ತಾರೆ. ನನಗೆ ಕೊಡಬೇಕಿರುವ ಹಣವನ್ನು ಕೊಡದೆ ಹತ್ತು ತಿಂಗಳು ಸತಾಯಿಸಿದ್ದರು. ನಾನು ಮಾದ್ಯಮಗಳ ಮುಂದೆ ಹೋಗಿ ಇಲ್ಲ ಸಲ್ಲದವರ ವಿಚಾರಗಳನ್ನು ಬೀದಿಗೆಳೆದಿದ್ದೇನಾ.., ಹೋಗಲಿ ನನ್ನ ಬಳಿ ಗಣೇಶ್ ಕೊಟ್ಟಿದ್ದ ಕಾಲಿ ಚೆಕ್ ಇತ್ತು. ನಾನೇನಾದರೂ ಬ್ಯಾಂಕ್‌ಗೆ ಹಾಕಿ ತೊಂದರೆ ಕೊಟ್ಟಿದ್ದೇನಾ..? ಕನ್ನಡ ಚಿತ್ರರಂಗದ ನಿಯಮಾವಳಿಗಳಂತೆ ಕಲಾವಿದರ ಸಂಘಕ್ಕೆ ದೂರು ನೀಡಿದ್ದೇನೆ. ಅವರಿಂದ ನ್ಯಾಯಕ್ಕಾಗಿ ಕಾಯುತ್ತಿದ್ದೇನೆ. ಇದು ತಪ್ಪಾ..? ಎಂದು ಪ್ರಶ್ನಿಸಿದರು.
'ಸಂಜು ವೆಡ್ಸ್ ಗೀತಾ' ಪ್ರಚಾರಕ್ಕೆ ಖಂಡಿತ ಹೋಗ್ತೇನೆ! 'ದಂಡಂ ದಶಗುಣಂ' ಚಿತ್ರದ ಪ್ರಚಾರಕ್ಕೆ ಖಂಡಿತವಾಗಿಯೂ ಹೋಗಲ್ಲ. ಅವರು ನನ್ನೊಂದಿಗೆ ಸರಿಯಾಗಿ ನಡೆದುಕೊಂಡಿಲ್ಲ. ಅದ್ದರಿಂದ ನಾನೂ ಸರಿಯಾಗಿ ಸ್ಪಂದಿಸುವುದಿಲ್ಲ. ಆದರೆ 'ಸಂಜು ವೆಡ್ಸ್ ಗೀತಾ' ಚಿತ್ರ ನಿರ್ದೇಶಕರು ನನಗೆ ಯಾವ ರೀತಿಯಲ್ಲಿಯೂ ತೊಂದರೆ ಕೊಟ್ಟಿಲ್ಲ. ಆದ್ದರಿಂದ ಆ ಚಿತ್ರದ ಪ್ರಚಾರಕ್ಕೆ ಖಂಡಿತ ಹೋಗುತ್ತೇನೆ ಎಂದರು.
ನಾವು ಪ್ರಚಾರ ಮಾಡಿದ ಮಾತ್ರಕ್ಕೆ ಚಿತ್ರ ಓಡಲ್ಲ.... ಖಂಡಿತವಾಗಿಯೂ ಚಿತ್ರದ ಪ್ರಚಾರಕ್ಕೆ ಹೋಗುವುದಿಲ್ಲ ಎಂದಿದ್ದೀರ, ಹಾಗಾದರೆ ನೀವೇ ನಟಿಸಿದ ಚಿತ್ರದ ಸ್ಥಿತಿ ಏನು ಎಂದು ಸುದ್ಧಿವಾಹಿನಿಯೊಂದು ಪ್ರಶ್ನಿಸಿದಕ್ಕೆ ಉತ್ತರಿಸಿದ ರಮ್ಯಾ, 'ನಾವು ಎಷ್ಟೇ ಪ್ರಚಾರ ಮಾಡಿದ್ರು ಪ್ರಯೋಜನವಿಲ್ಲ. ಹಳ್ಳಿ-ಹಳ್ಳಿಗೆ ತೆರಳಿ ಮನೆಬಾಗಿಲಿಗೆ ಹೋದರೂ, ಪಿಚ್ಚರ್ ಚನ್ನಾಗಿದ್ರೆ ಮಾತ್ರ ಜನ ನೋಡ್ತಾರೆ' ಎಂದರು.