'ಶ್ರೀ ನಾಗಶಕ್ತಿ', 'ಆದಿಚುಂಚನಗಿರಿ ಮಹಾತ್ಮೆ'ಗಳಂತಹ ದೈವಿಕತೆಯ ಚಿತ್ರಗಳಿಂದ ಸದ್ಯ ಬಿಡುಗಡೆ ಪಡೆದಿರುವ ನಿರ್ದೇಶಕ ಸಾಯಿಪ್ರಕಾಶ್ ಅವರು ಈಗ 'ತುಳಸಿ'ಗೆ ಮೊರೆ ಹೋದಂತಿದೆ.
ದರ್ಶನ್ ಅಭಿನಯದ 'ಬಾಸ್' ನಂತರ ನಿರ್ಮಾಪಕ ರಮೇಶ್ ಯಾದವ್ 'ತುಳಸಿ'ಯನ್ನು ನಿರ್ಮಿಸಲಿದ್ದು, ಹಳ್ಳಿ ಹಿನ್ನೆಲೆಯ ಸೆಂಟಿಮೆಂಟ್ ಚಿತ್ರಗಳನ್ನು ಮಾಡಿದ ಹ್ಯಾಂಗೋವರ್ನಲ್ಲಿರುವ ಅವರು ಮತ್ತೋರ್ವ ಸೆಂಟಿಮೆಂಟ್ ಚಿತ್ರಗಳ ನಿರ್ದೇಶಕ ಸಾಯಿಪ್ರಕಾಶ್ ಅವರಿಗೆ 'ತುಳಸಿ' ನಿರ್ದೇಶನದ ಜವಾಬ್ದಾರಿ ಒಪ್ಪಿಸಿದ್ದಾರೆ.
'ತುಳಸಿ' ಸೆಟ್ಟೇರಿತೆಂದರೆ ಸ್ಯಾಂಡಲ್‌ವುಡ್‌ನಲ್ಲಿ ರಮೇಶ್ ಯಾದವ್ ಚಿತ್ರಗಳ ಸಂಖ್ಯೆ 21ಕ್ಕೆ ಏರಲಿದೆ. ಮೈಸೂರು ಭಾಗದ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು 'ತುಳಸಿ' ಹೊಂದಿದೆ. ಈ ಚಿತ್ರಕ್ಕೆ ಡಿ.ಎ.ಮಧು ಅವರ ಸಂಭಾಷಣೆ, ಜೆ.ಜಿ. ಕೃಷ್ಣಾ ಅವರ ಛಾಯಾಗ್ರಹಣವಿದೆ.
ಖಳನಟ ಕಿಶೋರ್ 'ಹುಲಿ' ನಂತರ 'ತುಳಸಿ'ಯಲ್ಲಿ ನಾಯಕ ಸ್ಥಾನಕ್ಕೆ ಏರಿದ್ದು ಸ್ಯಾಂಡಲ್‌ವುಡ್‌ನಲ್ಲಿ ಅವರಿನ್ನು ನಾಯಕರಾಗಿಯೇ ಮುಂದುವರಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಜಿಂಕೆಮರಿ ಖ್ಯಾತಿಯ ರೇಖಾ 'ತುಳಸಿ'ಯ ನಾಯಕಿ. ಕೆ.ಕಲ್ಯಾಣ್ ಈ ಚಿತ್ರಕ್ಕೆ ಐದು ಹಾಡುಗಳನ್ನು ಬರೆದಿದ್ದು ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ರಫ್, ಸೆಂಟಿಮೆಂಟ್ ಹಾಗೂ ಪ್ರೇಮದ ಅಂಶಗಳನ್ನೊಳಗೊಂಡ ಕಥೆಯನ್ನು ಹೊಂದಿರುವ 'ತುಳಸಿ'ಯಲ್ಲಿ ಮೂರು ವಿಶೇಷ ಫೈಟ್‌ಗಳಿವೆಯಂತೆ.
ಏಪ್ರಿಲ್ ಮೊದಲ ವಾರದಲ್ಲಿ 'ತುಳಸಿ'ಯ ಚಿತ್ರೀಕರಣ ಆರಂಭಿಸಲು ರಮೇಶ್ ಯಾದವ್ ಸಿದ್ಧತೆ ನಡೆಸಿದ್ದು ನಿರ್ದೇಶನ ಕಾರ್ಯದತ್ತ ಸಾಯಿಪ್ರಕಾಶ್ ಮಗ್ನರಾಗಿದ್ದಾರೆ.