ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪೂಜಾ ನಟಿಸಿದ ಚಿತ್ರ ಬಾಕ್ಸ್ ಆಫೀಸ್ ಬಾಗಿಲನ್ನೂ ತಟ್ಟಲ್ಲ! (Pooja Gandhi | Neenillade | Mungaru Male | KFCC)
WD
ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘದ ಕಲಹ ಬೀದಿರಂಪದಂತೆ ರಾಜ್ಯವಿಡೀ ಸುದ್ಧಿಮಾಡುತ್ತಿರುವಾಗ, ಅದರೊಳಗಿಂದ ಒಬ್ಬರು ನಿರ್ಮಾಪಕರು ತನ್ನ ಹೆಸರನ್ನು ಹೇಳಲು ಇಚ್ಚಿಸದೆ ನಟಿ ಪೂಜಾ ಗಾಂಧಿ ವಿರುದ್ಧ ಕೆಂಡಕಾರಿದ್ದಾರೆ.

ಈಗಲೂ ಕೂಡಾ 'ಮುಂಗಾರು ಮಳೆ' ಚಿತ್ರದ ಹೆಸರು ಹೇಳಿಕೊಂಡೇ ಪೂಜಾ ಗಾಂಧಿ ಚಾಲ್ತಿಯಲ್ಲಿದ್ದಾರೆ. ಆದರೆ ಅವರ ಒಂದು ಚಿತ್ರವೂ ಬಾಕ್ಸ್ ಆಫೀಸಿನ ಬಾಗಿಲನ್ನೂ ತಟ್ಟುತ್ತಿಲ್ಲ ಎಂದು ಆರೋಪಿಸಿದ್ದಾರೆ.

'ಮೊದಲ ಚಿತ್ರ 'ಮುಂಗಾರು ಮಳೆ' ಬಿಟ್ಟರೆ ಪೂಜಾ ಗಾಂಧಿ ಅಭಿನಯಿಸಿದ ನಂತರದ ಚಿತ್ರಗಳೆಲ್ಲವೂ ತೋಪು. ಆದರೂ ಆಕೆಯ ಸಂಭಾವನೆ ಮಾತ್ರ ಸಿಕ್ಕಾಪಟ್ಟೆ ಏರುತ್ತಲೇ ಇದೆ. ಮೇಲಾಗಿ ಇತ್ತೀಚಿನ ದಿನಗಳಲ್ಲಿ ಆಕೆಯ ವರ್ತನೆಯೂ ಸರಿಯಿಲ್ಲ. ಚಿತ್ರ ನಿರ್ಮಾಣದಲ್ಲಿ ನಿರ್ಮಾಪಕರಿಗೆ ಸಹಕಾರವನ್ನು ಆಕೆ ಕೊಡುತ್ತಿಲ್ಲ' ಎಂದು ಆ ನಿರ್ಮಾಪಕರು ಬುಸುಗುಟ್ಟಿದ್ದಾರೆ.

'ದಂಡಂ ದಶಗುಣಂ' ಚಿತ್ರದ ಇತ್ತೀಚಿನ ವಿವಾದಗಳ ಬೆಳವಣಿಗೆಗಳಲ್ಲಿ ಸಕ್ರಿಯರಾಗಿದ್ದ ಈ ನಿರ್ಮಾಪಕರು ಪೂಜಾ ಗಾಂಧಿ ನೀಡುತ್ತಿರುವ ಹೇಳಿಕೆಗಳನ್ನು ಕಟು ಮಾತಿನಿಂದ ಖಂಡಿಸಿದ್ದಾರೆ. ಪೂಜಾ ಗಾಂಧಿ ಹೊರಗಿನಿಂದ ಬಂದವರು ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ.

'ನೀನಿಲ್ಲದೆ' ಚಿತ್ರದ ಬಿಡುಗಡೆಗೆ ತಡವಾಗುತ್ತಿರುವುದಕ್ಕೆ ಪೂಜಾ ಗಾಂಧಿ ಅವರೇ ಕಾರಣ ಎಂಬ ಆರೋಪವೂ ನಿರ್ಮಾಪಕರ ಸಂಘದಿಂದ ಕೇಳಿಬಂದಿದೆ. 'ನೀನಿಲ್ಲದೆ' ಚಿತ್ರಕ್ಕೆ ಒಮ್ಮೆ ಒಪ್ಪಿಕೊಂಡ ಮೇಲೆ ಬೇರೆ-ಬೇರೆ ಚಿತ್ರಗಳನ್ನೂ ಅವರು ಒಪ್ಪಿಕೊಂಡರು. ಆದ್ದರಿಂದ ಚಿತ್ರ ಬಿಡುಗಡೆಗೆ ತಡವಾಗಿದೆ ಎಂದಿರುವ ಅವರು ಪೂಜಾಗೆ ಕೊಡಬೇಕಿದ್ದ ಸಂಭಾವನೆಯನ್ನು ಏಕೆ ಆರು ತಿಂಗಳಿಂದ ಸತಾಯಿಸಲಾಗುತ್ತಿದೆ ಎಂಬ ಬಗ್ಗೆ ಸೊಲ್ಲೆತ್ತಿಲ್ಲ.

ಪೂಜಾ ಗಾಂಧಿ ಅಭಿನಯದ ಚಿತ್ರ ಒಂದು ವಾರ ಓಡದಿದ್ದರೂ ಕೂಡಾ ಅವರಿಗೆ ಹೊಸ ಚಿತ್ರಗಳು ಸುಲಭದಲ್ಲೇ ಸಿಗುತ್ತವಲ್ಲಾ ಎಂಬ ಪ್ರಶ್ನೆಗೆ ಈ ನಿರ್ಮಾಪಕರು 'ಇದು ಲೆಕ್ಕಾಚಾರ ಗೊತ್ತಿಲ್ಲದ ಗಾಂಧಿನಗರದ ಹೊಸ ನಿರ್ಮಾಪಕರು ಮಾಡುತ್ತಿರುವ ತಪ್ಪು' ಎಂದು ಉತ್ತರಿಸಿದ್ದಾರೆ.

ಮೂಲತಃ ಉತ್ತರ ಪ್ರದೇಶದ ನಿವಾಸಿಯಾದ ಪೂಜಾ ಮೊದಲಿಗೆ ಜಾಹಿರಾತುಗಳಲ್ಲಿ ಕಾಣಿಸಿಕೊಂಡು, 2003ರಲ್ಲಿ ಬಂಗಾಳಿ ಚಿತ್ರವೊಂದರಲ್ಲಿ ನಟಿಸುವ ಮೂಲಕ ಬಣ್ಣದ ಜೀವನ ಆರಂಭಿಸಿ 'ಮುಂಗಾರು ಮಳೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಇವನ್ನೂ ಓದಿ