ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಒಂದು ವರ್ಷ ನಿಷೇಧ; ಇದೊಂದು ಬಿಗ್ ಜೋಕ್ ಎಂದ ರಮ್ಯಾ! (Dandam Dashagunam | Ramya | A.Ganesh | KFCC)
PR
'ಇದೊಂದು ಬಿಗ್ ಜೋಕ್. ನಾನೇ ಕನ್ನಡ ಚಿತ್ರರಂಗದಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿರುವಾಗ ಅವರ್ಯಾರು ನನ್ನನ್ನು ಬಹಿಷ್ಕರಿಸಲಿಕ್ಕೆ? ಇದು ನನಗೆ ಕೊಟ್ಟಿರುವ ಶಿಕ್ಷೆ ಅಲ್ಲ. ಅಭಿಮಾನಿಗಳಿಗೆ ನೀಡಿದ ಶಿಕ್ಷೆ. ನನ್ನಲ್ಲಿ ಎಲ್ಲ ದಾಖಲೆಗಳೂ ಇವೆ. ಇಗಾಗಲೇ ಎಲ್ಲ ಮಾಧ್ಯಮ ಕಚೇರಿಗಳಿಗೆ ತಿಳಿಸಿದ್ದೇನೆ. ನನ್ನ ಬಗ್ಗೆ ಆರೋಪ ಮಾಡುತ್ತಿರುವ ಗಣೇಶ್ ದಾಖಲೆ ತೋರಿಸಲಿ'

ಹೀಗೆಂದು ನಟಿ ರಮ್ಯಾ ಅವರು ತಮ್ಮ ವಿರುದ್ಧ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಒಂದು ವರ್ಷ ನಟಿಸದಂತೆ ಬಹಿಷ್ಕಾರ ಹೇರಲು ನಿರ್ಧರಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

'ಯಾವ ಕಾರಣಕ್ಕೆ ನನ್ನ ಮೇಲೆ ಬಹಿಷ್ಕಾರ ಹಾಕಿದ್ದಾರೆ? ಚಿತ್ರದ ನಿರ್ಮಾಪಕರಿಗೆ ಸಹಾಯ ಮಾಡಿದ್ದಕ್ಕಾಗಿ ಈ ಬಹಿಷ್ಕಾರವೇ? ಒಬ್ಬರಿಗೆ ನಾನು ಸಹಾಯ ಮಾಡಿ ಸಹಾಯ ಪಡೆದವರಿಂದಲೇ ನಾನು ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಈ ಪರಿಸ್ಥಿತಿ ನನಗೆ ಬೇಕಿತ್ತಾ? ಈ ವಿವಾದಕ್ಕೆ ಸಂಬಂಧಿಸಿದಂತೆ ನನಗೆ ನ್ಯಾಯ ಸಿಗುವುದಿಲ್ಲ ಅಂತ ನಾನು ಮೊದಲೇ ನೀರೀಕ್ಷೆ ಮಾಡಿದ್ದೆ. ಆದರೆ ಬಹಿಷ್ಕಾರ ನಿರ್ಧಾರ ನನಗೆ ದೊಡ್ಡ ಜೋಕ್ ಆಗಿ ಕಾಣುತ್ತಿದೆ' ಎಂದಿದ್ದಾರೆ ರಮ್ಯಾ.

'ಎಲ್ಲರೂ ನನ್ನನ್ನು ದೂಷಿಸಿ ಮಾತನಾಡುತ್ತಾರೆ. ಆದರೆ ನನಗೆ ಕೊಡಬೇಕಾದ ಹಣವನ್ನು ಮಾತ್ರ ಇದುವರೆಗೂ ಕೊಟ್ಟಿಲ್ಲ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಹತ್ತು ಲಕ್ಷ ರೂಪಾಯಿ ಹಣ ತೆಗೆದುಕೊಂಡು ಎಂಟು ತಿಂಗಳ ಕಾಲ ಹಣ ಹಿಂದಿರುಗಿಸದೆ ಸತಾಯಿಸಿದರು. ನಂತರ ಒಂದು ಲಕ್ಷ ಹಣ ಕೊಟ್ಟರು. ಈಗ ಬರಬೇಕಿರುವ ಹಣ ಕೊಟ್ಟಿಲ್ಲ. ನನಗೆ ಬಹಿಷ್ಕಾರ ಹಾಕುವವರು ನನ್ನ ದುಡ್ಡು ಕೊಡಿಸುತ್ತಾರೆಯೇ' ಎಂದು ರಮ್ಯಾ ಪ್ರಶ್ನಿಸಿದ್ದಾರೆ.

'ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮತ್ತು ಎ. ಗಣೇಶ್ ಬಳಿ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟಪಡಿಸಿರುವ ರಮ್ಯಾ 'ನನ್ನ ಮುಂದಿನ ನಿರ್ಧಾರ ಮತ್ತು ಹಾದಿಯನ್ನು ಕರ್ನಾಟಕ ರಾಜ್ಯ ಚಲನ ಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರಿಗೆ ಬಿಟ್ಟಿದ್ದೇನೆ' ಎಂದಿದ್ದಾರೆ.
ಇವನ್ನೂ ಓದಿ